ಅರ್ಜಿಗಳ ವಿಲೇವಾರಿಗೆ 30 ದಿನ ಗಡುವು

hosakote janatadarshana
janatadarshana program at hosakote
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಜನತಾದರ್ಶನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು 30 ದಿನದೊಳಗೆ ವಿಲೇವಾರಿ ಮಾಡಲೇಬೇಕು ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಸಯ್ಯದ್ ಪ್ಯಾಲೇಸ್‌ನಲ್ಲಿ ಹಮ್ಮಿಕೊಂಡಿದ್ದ ಜನತಾದರ್ಶನದಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಜನರ ಸಮಸ್ಯೆಗಳ ಪರಿಹಾರಕ್ಕೆ ವಿಳಂಬ ಮಾಡದೆ ಶೀಘ್ರ ಪರಿಹರಿಸಲು ಅಧಿಕಾರಿಗಳು ಗಮನ ನೀಡಬೇಕು ಎಂದರು.
ಕಾಂಗ್ರೆಸ್, ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಜನರ ಸಮಸ್ಯೆಗಳನ್ನು ಆಲಿಸುವ ಭರವಸೆ ನೀಡಿತ್ತು, ಈ ಮಾತು ಉಳಿಸಿಕೊಳ್ಳಲು ಜನತಾದರ್ಶನ ಎಂಬ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಜನರು ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ ಜನರ ಬಳಿಗೆ ಅಧಿಕಾರಿಗಳು ಹೋಗಿ ಸಮಸ್ಯೆ ಆಲಿಸಿ ಪರಿಹಾರ ಕೊಡುವ ಈ ಕಾರ್ಯಕ್ರಮ ಯಶಸ್ವಿಯಾಗಬೇಕು. ಇದಕ್ಕೆ ಅಧಿಕಾರಿಗಳ ಸ್ಪಂದನೆ ಮುಖ್ಯ ಎಂದರು.
ನ್ಯಾಯಾಲಯದ ಸಮಸ್ಯೆಗಳನ್ನು ಹೊರತುಪಡಿಸಿ ಇನ್ನುಳಿದ ಕುಂದುಕೊರತೆಗಳನ್ನು ಕಾಲಮಿತಿಯೊಳಗೆ ಪರಿಹರಿಸಬೇಕು. ಜಮೀನು ಸರ್ವೇ, ಹದ್ದುಬಸ್ತು ಸಮಸ್ಯೆಗಳು ಹೆಚ್ಚಾಗಿದ್ದು, ಇದರ ಪರಿಹಾರಕ್ಕೆ ಕಂದಾಯ ಸಚಿವರ ಬಳಿ ಮಾತನಾಡಿ, ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಜಮೀನುಗಳಲ್ಲಿ ಸರ್ಕಾರಿ ದಾರಿ ಒತ್ತುವರಿ ಮಾಡಿರುವ ರೈತರು ಸ್ವಯಂ ಪ್ರೇರಣೆಯಿಂದ ಬಿಟ್ಟುಕೊಟ್ಟು ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.

ನುಡಿದಂತೆ ನಡೆದಿದೆ: ಸರ್ಕಾರ ನೀಡಿದ್ದ ಐದು ಗ್ಯಾರಂಟಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮೂಲಕ ಕಾಂಗ್ರೆಸ್ ನುಡಿದಂತೆ ನಡೆದಿದೆ ಎಂದು ಶಾಸಕ ಶರತ್‌ಬಚ್ಚೇಗೌಡ ಪುನರುಚ್ಚರಿಸಿದರು. ಚುನಾವಣೆ ಸಮಯದಲ್ಲಿ ಬಂದು ಭರವಸೆ ನೀಡಿ ಹೋಗಿ ಮತ್ತೆ ಚುನಾವಣೆ ವೇಳೆಗಷ್ಟೇ ಜನಪ್ರತಿನಿಧಿಗಳು ಹಾಜರಾಗುತ್ತಾರೆ ಎಂಬ ಜನರ ಆರೋಪ ಕೇಳಿಬರದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಜನರು ಕಚೇರಿಗಳಿಗೆ ಅಲೆಯವುದನ್ನು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಜನತಾದರ್ಶನ ಮಾಡುತ್ತಿದ್ದು, ಇಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಮಸ್ಯೆ ಪರಿಹರಿಸುವ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಆದ್ಯತೆ ಮೇರಿಗೆ ವಿಲೇವಾರಿ ಮಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net