

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಸಮಾಜವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಕರ್ತವ್ಯ, ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಡಾ.ಜಿ.ಶ್ರೀನಿವಾಸ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ತಾಲೂಕಿನ ಪತ್ರಕರ್ತರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಕರ್ತರು ಸಮಾಜದ ಸ್ವಾಸ್ಥ್ಯ ಕಾಪಾಡುವವರಾಗಿದ್ದರೂ ಹಲವು ಜ್ವಲಂತ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಮುಖವಾಗಿ ಪತ್ರಕರ್ತರಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ. ಪತ್ರಕರ್ತರ ಸಮಸ್ಯೆ ಬಗ್ಗೆ ಸಂಘದ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಆಡಳಿತ ಮಂಡಳಿ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿತ್ತು. ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರಲಿಲ್ಲ. ಈಗ ಹೊಸ ಆಡಳಿತ ಮಂಡಳಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ದೊಡ್ಡಬಳ್ಳಾಪುರ ರಮೇಶ್ ತಿಳಿಸಿದರು.