

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ದೈವಕಲೆಯಾಗಿರುವ ಭರತ ನಾಟ್ಯವನ್ನು ಹದಿಹರೆಯದ ಮಕ್ಕಳಿಂದ ದೊಡ್ಡವರವರೆಗೆ ಮೈಗೂಡಿಸಿಕೊಂಡಿರುವುದು ಕಲೆಯ ಬೆಳವಣಿಗೆಯಾಗಿದೆ. ಭರತ ನಾಟ್ಯವನ್ನು ಮುಂದಿನ ಪೀಳಿಗೆಗೆ ನೀಡುತ್ತಿರುವ ನವಚೇತನ ನೃತ್ಯ ಕಲಾ ಅಕಾಡೆಮಿ ಕಾರ್ಯ ಶ್ಲಾಘನೀಯ ಎಂದು ಸಂಸದ ಬಿ.ಎನ್.ಬಚ್ಚೇಗೌಡ ಪತ್ನಿ ಉಮಾಬಚ್ಚೇಗೌಡ ಹೇಳಿದರು.
ನಗರದ ಪಟೇಲ್ ನಾರಾಯಣಗೌಡ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ, ನೃತ್ಯ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೃತ್ಯ ಮಾಡುವ ಮಕ್ಕಳಿಗೆ ಆಸಕ್ತಿ ಮೂಡಿಸುವ ಜತೆಗೆ ಪಾಲಕರ ಪ್ರೋತ್ಸಾಹ ಮುಖ್ಯ.14 ವರ್ಷಗಳಿಂದ ಇಂತಹ ನೃತ್ಯವನ್ನು ಸಾವಿರಾರು ಮಕ್ಕಳಿಗೆ ಕಲಿಸುತ್ತಿರುವುದು ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಜೀವಂತವಿರಿಸುವ ಪ್ರಯತ್ನವಾಗಿದೆ ಎಂದರು.
ಅಕಾಡೆಮಿ ಕಾರ್ಯದರ್ಶಿ ವಿದ್ವಾನ್ ಕೋಲಾರ ರಮೇಶ್ ಮಾತನಾಡಿ, ಕಳೆದ 14 ವರ್ಷಗಳಿಂದ ಸಾವಿರಾರು ಮಕ್ಕಳಿಗೆ ಈ ನೃತ್ಯವನ್ನು ಹೇಳಿಕೊಡುವ ಮೂಲಕ ರಾಜ್ಯ ದೇಶ ಹಾಗೂ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಜತೆಗೆ ಭರತನಾಟ್ಯ ಕಲಿತ ನೂರಾರು ವಿದ್ಯಾರ್ಥಿಗಳು ತಮ್ಮ ಸ್ವಂತ ಭರತ ನಾಟ್ಯ ಕಲಿಸುವ ಶಾಲೆಗಳನ್ನು ತೆರೆದು ನೃತ್ಯ ಗುರುಗಳಾಗಿ ವತ್ತಿ ಜೀವನ ಸಾಗಿಸುತಿದ್ದಾರೆ ಎಂದರು.
ನೃತ್ಯ ಕಲಾವಿದರಿಂದ ವಿವಿಧ ಸನ್ನಿವೇಶಗಳ ಭರತ ನಾಟ್ಯ ಪ್ರದರ್ಶನ ನಡೆಯಿತು. ತುಮಕೂರು ಜಿಲ್ಲೆಯ ಕೆಂಬಳಲುಪಾಳ್ಯದ ಶ್ರೀ ಪಾಲೇರಮ್ಮದೇವಿ ದೇವಾಲಯದ ನಾಗರಾಜ ಸ್ವಾಮೀಜಿಗೆ ಗುರುವಂದನೆ ಸಲ್ಲಿಸಲಾಯಿತು. 250 ಭರತ ನಾಟ್ಯ ವಿದ್ಯಾರ್ಥಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷೆ ಸಾವಿತ್ರಮ್ಮ ತ್ಯಾಗರಾಜ್‌ರಿಂದ ಉಚಿತ ಕುಡಿಯುವ ನೀರಿನ ಸ್ಟೀಲ್ ಬಾಟಲ್‌ಗಳನ್ನು ವಿತರಿಸಲಾಯಿತು.
ಜಿಟಿಬಿ ಗ್ರೂಪ್ ಮಾಲೀಕ ಎಚ್.ಜಿ.ತ್ಯಾಗರಾಜ್, ರೋಟರಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್, ನಗರಸಭಾ ಸದಸ್ಯ ನವೀನ್‌ಕುಮಾರ್ ಇತರರು ಇದ್ದರು.