ಹೊಸಕೋಟೆ ವೈದ್ಯಾಧಿಕಾರಿ ನಾಪತ್ತೆ, ಪ್ರಭಾವಿಗಳಿಂದ ಅಪಹರಣ ವದಂತಿ, ಮೈಸೂರಿನಲ್ಲಿ ವೈದ್ಯ?

dc office protest
Published on

ಹೊಸಕೋಟೆ: ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸುತ್ತಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುನಾಥ್ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಮಂಜುನಾಥ್‌ರನ್ನು ಅಪಹರಿಸಲಾಗಿದೆ ಎಂಬ ವದಂತಿ ದಟ್ಟವಾಗಿರುವ ನಡುವೆಯೇ ಮೈಸೂರಿನಲ್ಲಿ ಅವರು ಸುತ್ತಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎನ್ನಲಾಗಿದೆ.

ಈ ನಾಟಕೀಯ ಬೆಳವಣಿಗೆ ನಡುವೆಯೇ ಜಿಲ್ಲೆಯಾದ್ಯಂತ ಗ್ರಾಮಾಂತರ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾಕಾರ್ಯಕರ್ತೆಯರು ವೈದ್ಯರನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದೆರಡು ದಿನಗಳಿಂದ ಪ್ರಕರಣದ ಬೆನ್ನುಬಿದ್ದಿರುವ ಜಿಲ್ಲಾ ಪೊಲೀಸರು ಮೈಸೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೈದ್ಯರ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.

ಧಮ್ಕಿ ಕಾರಣವೇ?: ವೈದ್ಯ ನಾಪತ್ತೆ ಹಿಂದೆ ಬಿಜೆಪಿ ಮುಖಂಡರೊಬ್ಬರ ಧಮ್ಕಿ ಕಾರಣವಾಗಿದೆ ಎಂಬ ಮಾತು ಹರಿದಾಡುತ್ತಿದ್ದು, ಜಿಲ್ಲಾ ಪೊಲೀಸರು ಆತನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಳಿಯೇ ಕಾರಣ!: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಕಲಿ ಕ್ಲಿನಿಕ್‌ಗಳು ತಲೆ ಎತ್ತಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಕಲಿ ಕ್ಲಿನಿಕ್‌ಗಳ ಮೇಲೆ ಇತ್ತೀಚೆಗೆ ಟಿಎಚ್‌ಒ ಡಾ. ಮಂಜುನಾಥ್ ದಾಳಿ ನಡೆಸಿದ್ದರು. 2 ದಿನದ ಹಿಂದೆ ನಕಲಿ ಕ್ಲಿನಿಕ್‌ವೊಂದರ ಮೇಲೆ ದಾಳಿ ನಡೆಸಿ ಸುಮಾರು 2 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಕ್ಲಿನಿಕ್ ಸೀಜ್ ಮಾಡಿದ್ದರು. ನಕಲಿ ಕ್ಲಿನಿಕ್ ನಡೆಸುತ್ತಿದ್ದ ಸಂಬಂಧ ಕ್ಲಿನಿಕ್ ವೈದ್ಯರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಹಂತಕ್ಕೆ ತಲುಪಿದ್ದರು. ಈ ವೇಳೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ಮಧ್ಯಪ್ರವೇಶಿಸಿ ಕ್ರಮಕೈಗೊಳ್ಳದಂತೆ ಎಚ್ಚರಿಕೆ ನೀಡುವ ಜತೆಗೆ ಟಿಎಚ್‌ಒ ವಿರುದ್ಧ ಏಕವಚನದಲ್ಲಿ ನಿಂದಿಸಿದ್ದರು ಎನ್ನಲಾಗಿದೆ. ಈ ಕುರಿತು ಡಾ. ಮಂಜುನಾಥ್ ಪೊಲೀಸ್ ಠಾಣೆಗೆ ತೆರಳಿದರೆ ಪೊಲೀಸರು ಸ್ಪಂದನೆ ನೀಡಲಿಲ್ಲ, ಇದರಿಂದ ವೈದ್ಯರು ಸಾಕಷ್ಟು ನೊಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಸ್ನೇಹಿತ ಗೋಪಾಲ್ ಕೃಷ್ಣ ಎಂಬುವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರತಿಭಟನೆ ತೀವ್ರ: ವೈದ್ಯರ ನಾಪತ್ತೆ ಪ್ರಕರಣ ಜಿಲ್ಲೆಯಾದ್ಯಂತ ವೈದ್ಯಕೀಯ ಸಿಬ್ಬಂದಿಯಲ್ಲಿ ಆತಂಕ ಸೃಷ್ಟಿಸಿದ್ದು, ಎಲ್ಲೆಡೆ ಪ್ರತಿಭಟನೆ ಕಾವೇರತೊಡಗಿದೆ. ಘಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ. ಸದ್ಯ ವೈದ್ಯರು ಮೈಸೂರಿನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅವರನ್ನು ಕರೆತರುವ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಡಾ.ಮಂಜುನಾಥ್ ದಾಳಿ ಮಾಡಿದ್ದ ಕ್ಲಿನಿಕ್‌ಗೆ ಡಿ.16 ರಂದು ಜಿಲ್ಲಾ ವೈದ್ಯಾಧಿಕಾರಿ ಮಂಜುಳಾ ದೇವಿ ಭೇಟಿ ನೀಡಿ ಆಸ್ಪತ್ರೆಗೆ ಬೀಗ ಮುದ್ರೆ ಹಾಕಿ ಅಲ್ಲಿನ ವೈದ್ಯ ಮೋಹನ್ ಎಂಬುವರಿಗೆ ನೋಟೀಸ್ ಜಾರಿ ಮಾಡಿದ್ದರು.ಇದರಿಂದ ಕೆರಳಿದ ಮೋಹನ್ ರಾಜಕೀಯ ಪ್ರಭಾವ ಬಳಸಿ ತಾಲೂಕು ವೈದ್ಯಾಧಿಕಾರಿ ಮೇಲೆ ಒತ್ತಡ ಹೇರಿದ್ದರು ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಹರಿದಾಡುತ್ತಿದೆ. ಡಿ.15 ರ ಸಂಜೆಯಿಂದಲೇ ವೈದ್ಯಾಧಿಕಾರಿ ಕಣ್ಮರೆಯಾಗಿದ್ದು, ಡಿ.16 ರಂದು ಸ್ನೇಹಿತರೊಬ್ಬರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

10 ತಂಡದಿಂದ ಹುಡುಕಾಟ: ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ ಡಿ ಚನ್ನಣ್ಣನವರ್ ಮಾರ್ಗದರ್ಶನದಲ್ಲಿ 10 ಪೊಲೀಸರ ತಂಡ ವೈದ್ಯಾಧಿಕಾರಿ ಮಂಜುನಾಥ್ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಪಂಚರ್: ವೈದ್ಯಾಧಿಕಾರಿ ಕಾರು ಚನ್ನಪಟ್ಟಣದಲ್ಲಿ ಪಂಚರ್ ಆಗಿದ್ದು, ಸಮೀಪದ ಅಂಗಡಿಯಲ್ಲಿ ಪಂಚರ್ ಹಾಕಿಸಿಕೊಂಡು ಮೈಸೂರು ಕಡೆಗೆ ಹೊರಟ ದೃಶ್ಯ ಸ್ಥಳೀಯ ಅಂಗಡಿಗಳಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ, ಅಲ್ಲದೆ ಮೈಸೂರಿನ ಕೆಲವು ಭಾಗಗಳಲ್ಲಿ ವೈದ್ಯರ ಕಾರಿನ ಸಂಚಾರದ ದೃಶ್ಯ ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿದ್ದು ದೃಶ್ಯಗಳನ್ನು ಆಧರಿಸಿ ವೈದ್ಯರನ್ನು ಪತ್ತೆ ಹಚ್ಚಲು ಪೊಲೀಸ್ ಪಡೆ ಕಸರತ್ತು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ವೈದ್ಯಾಧಿಕಾರಿ ಮಂಜುನಾಥ್ ಸದ್ಯ ಮೈಸೂರು ಭಾಗದಲ್ಲಿರುವ ಮಾಹಿತಿ ದೊರೆತಿದೆ. ಆದರೆ ಅವರು ಮೊಬೈಲ್ ಬಳಕೆ ಮಾಡದಿರುವುದರಿಂದ ಸ್ಥಳ ಗುರುತಿಸುವಲ್ಲಿ ಸಮಸ್ಯೆಯಾಗುತ್ತಿದೆ. ವೈದ್ಯರ ಪತ್ತೆಗೆ ತೀವ್ರ ಹುಡುಕಾಟ ನಡೆಸುತ್ತಿದ್ದು, ಆದಷ್ಟು ಬೇಗ ಪ್ರಕರಣ ಬೇಧಿಸಲಾಗುವುದು. ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವೈದ್ಯರನ್ನು ಹುಡುಕಿ ಕೊಡಿ: ನಾಪತ್ತೆಯಾಗಿರುವ ಹೊಸಕೋಟೆ ತಾಲೂಕು ವೈದ್ಯಾದಿಕಾರಿ ಡಾ.ಮಂಜುನಾಥ್ ಅವರನ್ನು ಹುಡುಕಿಕೊಡಿ ಎಂದು ಆಗ್ರಹಿಸಿ ಗುರುವಾರ 400ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ದೇವನಹಳ್ಳಿ ತಾಲೂಕು ಕುಂದಾಣ ಜಿಲ್ಲಾಡಳಿತ ಭವನದ ಅವರಣದಲ್ಲಿ ಪ್ರತಿಭಟನೆ ನಡೆಸಿದರು. ಹೊಸಕೋಟೆಯಲ್ಲಿ ಅಲೋಪಥಿ ಚಿಕಿತ್ಸೆ ನೀಡಿ ರೋಗಿಗಳನ್ನು ವಂಚಿಸುತಿದ್ದ ಮೋಹನ್ ಎಂಬಾತನ ನಕಲಿ ಕ್ಲಿನಿಕಿನ ಮೇಲೆ ದಾಳಿ ನಡೆಸಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಮೋಹನ್ ತನ್ನ ಸಂಗಡಿಗರೊಂದಿಗೆ ಬಂದು ಡಾ.ಮಂಜುನಾಥ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದರು. ಕರ್ತವ್ಯಕ್ಕೆ ಅಡ್ಡಿಪಡಿಸಿ ವೈದ್ಯರನ್ನು ಅಪಹರಿಸಿರುವ ಶಂಕೆ ಇದೆ ಈ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಗ್ರಾಮಾಂತರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಜಗದೀಶ್ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net