ಒತ್ತುವರಿ ತೆರವು ಹಗ್ಗ-ಜಗ್ಗಾಟ

hosakote footpath encrochment
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹೊಸಕೋಟೆ ನಗರದಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ಒತ್ತುವರಿ ತೆರವು ಪ್ರಹಸನ ಅಧಿಕಾರಿಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ನಡುವಿನ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ.
ಈಗಾಗಲೇ ಹಲವು ಅಂಗಡಿಗಳನ್ನು ತೆರವು ಮಾಡಿರುವ ನಗರಸಭೆ ಅಧಿಕಾರಿಗಳು ಕೆಲವೊಂದು ಅಂಗಡಿಗಳ ತೆರವಿಗೆ ಸಜ್ಜಾಗಿದ್ದಾರೆ. ಆದರೆ ಒತ್ತುವರಿ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಕೆಲವು ವ್ಯಾಪಾರಿಗಳು ಕಾನೂನಿನ ಮೊರೆ ಹೋಗಲು ಮುಂದಾಗಿದ್ದಾರೆ.

ನೋಟಿಸ್ ಕೊಟ್ಟಿಲ್ಲ: ಹತ್ತಾರು ವರ್ಷದಿಂದ ಜೀವನ ನಡೆಸುತ್ತಿದ್ದೇವೆ. ಏಕಾಏಕಿ ತೆರವುಗೊಳಿಸಿದರೆ ಬೀದಿಗೆ ಬೀಳಬೇಕಾಗುತ್ತದೆ ಎಂದು ವ್ಯಾಪಾರಿಗಳು ಕಣ್ಣೀರು ಹಾಕುತ್ತಿದ್ದಾರೆ. ುಟ್‌ಪಾತ್ ಒತ್ತುವರಿಯಾಗಿದ್ದರೆ ನೋಟಿಸ್ ನೀಡಬೇಕು. ತೆರವು ಮಾಡಿಕೊಳ್ಳಲು ಕಾಲಾವಕಾಶ ನೀಡಬೇಕು. ಆದರೆ ಅಧಿಕಾರಿಗಳು ಕಾಲಾವಕಾಶ ನೀಡದೆ ಹಠಾತ್ ಕಾರ್ಯಾಚರಣೆ ನಡೆಸಿದ್ದಾರೆ. ಇದರಿಂದ ಲಕ್ಷಾಂತರ ರೂ.ಮೌಲ್ಯದ ಅಂಗಡಿ ಪರಿಕರ ಹಾಳಾಗಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ಇದನ್ನು ಅಲ್ಲಗೆಳೆಯುತ್ತಿರುವ ಅಧಿಕಾರಿಗಳು ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ಸಭೆ ನಡೆಸಲಾಗಿದೆ. ಅವರಿಗೆ ನೋಟಿಸ್ ಸಹ ನೀಡಲಾಗಿದೆ. ಆದರೂ ತೆರವಿಗೆ ಮುಂದಾಗದ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡುತ್ತಾರೆ. ನೋಟಿಸ್ ವಿಚಾರವಾಗಿಯೇ ಅಧಿಕಾರಿಗಳು ಹಾಗೂ ಬೀದಿಬದಿ ವ್ಯಾಪಾರಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ.

ಪರ್ಯಾಯ ಜಾಗ ನೀಡಿಲ್ಲ: ಈ ಹಿಂದೆ ುಟ್‌ಪಾತ್ ಅಂಗಡಿಗಳ ತೆರವು ಸಂಬಂಧ ಅಧಿಕಾರಿಗಳು ಸಭೆ ನಡೆಸಿದ್ದರು. 16ನೇ ವಾರ್ಡ್‌ನಲ್ಲಿ ಪರ್ಯಾಯ ಜಾಗ ನೀಡುವ ಬಗ್ಗೆ ತಿಳಿಸಿದ್ದರು. ಅಲ್ಲದೆ ಚಿಕ್ಕಕೆರೆ ಬಳಿಯೂ ಪರ್ಯಾಯ ಜಾಗ ನೀಡುವುದಾಗಿ ತಿಳಿಸಿದ್ದರು. ಅಷ್ಟರಲ್ಲಿ ವಿಧಾನಸಭೆ ಚುನಾವಣೆ ಎದುರಾಗಿದ್ದರಿಂದ ಎಲ್ಲ ಪ್ರಕ್ರಿಯೆ ಸ್ಥಗಿತವಾಯಿತು. ಈಗ ಏಕಾಏಕಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರ್ಯಾಯ ಜಾಗದ ಬಗ್ಗೆ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ ಎಂದು ಬೀದಿ ಬದಿ ವ್ಯಾಪಾರಿಗಳು ಅಲವತ್ತುಕೊಂಡಿದ್ದಾರೆ.

ಪರವಾನಗಿಗೆ ಬೆಲೆ ಇಲ್ಲವೆ? ಬೀದಿ ಬದಿಯಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಇಟ್ಟುಕೊಳ್ಳಲು 2016ರಲ್ಲಿ ನಗರಸಭೆಯಿಂದಲೇ ಪರವಾನಗಿ ನೀಡಿದ್ದಾರೆ. ಆದರೆ ಈಗ ಪಾರ್ಲರ್ ತೆರವಿಗೆ ಮುಂದಾಗಿದ್ದಾರೆ. ಹಾಗಾದರೆ ಪರವಾನಗಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಉದ್ಬವವಾಗಿದೆ.


ರಾಜಕೀಯ ತಿರುವು:ಹೊಸಕೋಟೆಯಲ್ಲಿ ುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಮಾಜಿ ಸಚಿವ ಎಂಟಿಬಿ ನಾಗರಾಜ್ ಇದೊಂದು ದ್ವೇಷದ ರಾಜಕೀಯ ಎಂದು ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. ಕಾನೂನು ಪ್ರಕಾರ ುಟ್‌ಪಾತ್ ಒತ್ತುವರಿ ತೆರವು ಮಾಡುವುದರಲ್ಲಿ ತಪ್ಪಿಲ್ಲ. ಆದರೆ ನೋಟಿಸ್ ನೀಡದೆ, ಏಕಾಏಕಿ ಕಾರ್ಯಾಚರಣೆ ನಡೆಸಿರುವುದು ಸರಿಯಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಆರೋಪಿಸಿದ್ದಾರೆ.

ನಗರಸಭೆ ಅಧಿಕಾರಿಗಳು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಶಾಸಕರು ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಇದುವರೆಗೆ ಮೂರ‌್ನಾಲ್ಕು ಸಭೆ ನಡೆಸಿದ್ದಾರೆ. ಆದರೆ ಸದಸ್ಯರ ಅಭಿಪ್ರಾಯ ಕೇಳಿಲ್ಲ. ಸಭೆಗೂ ಆಹ್ವಾನಿಸಿಲ್ಲ.

ನಾಗರಾಜ್, ಮಾಜಿ ಅಧ್ಯಕ್ಷ, ನಗರಸಭೆ

ಅಧಿಕಾರಿಗಳ ದಿಢೀರ್ ನಿರ್ಧಾರದಿಂದ ಹತ್ತಾರು ವರ್ಷದಿಂದ ಜೀವನ ಕಟ್ಟುಕೊಂಡಿದ್ದ ನಾವೆಲ್ಲರೂ ಬೀದಿಗೆ ಬೀಳುವಂತಾಗಿದೆ. ತೆರವಿಗೆ ಕಾಲವಕಾಶವನ್ನಾದರೂ ನೀಡಬೇಕಿತ್ತು. ಜೆಸಿಬಿಗಳ ಮೂಲಕ ಅಂಗಡಿಗಳನ್ನು ನಜ್ಗುಗುಜ್ಜು ಮಾಡಿದ್ದಾರೆ. ಅಂಗಡಿಯಲ್ಲಿದ್ದ ಎಲ್ಲ ಪರಿಕರಗಳೂ ನಾಶವಾಗಿವೆ, ಬಡಜನರ ಮೇಲೆ ಈ ರೀತಿ ದಬ್ಬಾಳಿಕೆ ಮಾಡುವುದು ನ್ಯಾಯವಲ್ಲ.
ರಾಧಮ್ಮ, ಬೀದಿ ಬದಿ ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net