

ವಿಜಯವಾಣಿ ಸುದ್ದಿ ಹೊಸಕೋಟೆ
ತಾಲೂಕಿನ ಜಡಿಗೇನಹಳ್ಳಿ, ಅನುಗೊಂಡನಹಳ್ಳಿ ಹಾಗೂ ಕಸಬಾ ಹೋಬಳಿಯ ರೈತರಿಗೆ ಏತ ನೀರಾವರಿ ಯೋಜನೆ ವರದಾನವಾಗಲಿದೆ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ಕೊರಳೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ನೀರು ಸಂಸ್ಕರಣಾ ಘಟಕವನ್ನು ವೀಕ್ಷಣೆ ಮಾಡಿ ಮಾತನಾಡಿದರು. ಸೂಲಿಬೆಲೆ ಹಾಗೂ ನಂದಗುಡಿ ಹೋಬಳಿಗಳ ಕೆರೆಗಳಿಗೆ 2ನೇ ಹಂತದ ವೃಷಭಾವತಿ ವ್ಯಾಲಿ ಯೋಜನೆ ಮೂಲಕ ನೀರು ಪೂರೈಕೆ ಮಾಡುವ ಕಾರ್ಯಕ್ಕೆ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಾಡುವಂತೆ ಸಣ್ಣ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಮನವಿ ಮಾಡಲಾಗಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲೂಕಿನ 38 ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ತುಂಬಿಸುವ ಮಹತ್ವಾಕಾಂಕ್ಷೆಯ ಏತ ನೀರಾವರಿ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದ್ದು, ಸೆಪ್ಟೆಂಬರ್ ಅಂತ್ಯದೊಳಗೆ ಹರಿಸಲಾಗುವುದು ಎಂದರು.
ಇದರಿಂದ ಈ ಭಾಗದ ಕೃಷಿ ಪುನಶ್ಚೇತನದ ಜತೆಗೆ ಅಂತರ್ಜಲ ವೃದ್ಧಿಯಾಗಲಿದೆ. ಈಗಾಗಲೇ ಕೆಆರ್ ಪುರ ಬಳಿಯ ಎಸ್‌ಟಿಪಿ ಹಾಗೂ ಪಂಪ್ ಹೌಸ್, ಮೇಡಹಳ್ಳಿ ಬಳಿಯ ಪಂಪ್ ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಭೋಸರಾಜು ಅವರೊಂದಿಗೆ ಚರ್ಚಿಸಿ ಯೋಜನೆಗೆ ಚಾಲನೆ ನೀಡಲು ಮನವಿ ಮಾಡಲಾಗಿದೆ ಎಂದರು.
ಮಾನವ ಹಕ್ಕುಗಳ ಜಾಗೃತಿ ಸಮಿತಿ ಅಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್, ಮುಖಂಡರಾದ ಸಮೇತನಹಳ್ಳಿ ಸೊಣ್ಣಪ್ಪ, ಭೋದನಹೊಸಹಳ್ಳಿ ಪ್ರಕಾಶ್, ನಾರಾಯಣಗೌಡ, ಕೊರಳೂರು ಸುರೇಶ್, ಶಿವಕುಮಾರ್ ಹಾಜರಿದ್ದರು.