

ಹೊಸಕೋಟೆ: ಸ್ವಾತಂತ್ರ್ಯ ದಿನದಂದು ಜಾರ್ಖಂಡ್ ಮೂಲದ ವ್ಯಕ್ತಿ ತಾಲೂಕು ಕಚೇರಿ ಮೇಲಿಂದ ಬಿದ್ದು ಮೃತಪಟ್ಟ ಪ್ರಕರಣ ನಿಗೂಢವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬಂತೆ ಕಂಡುಬಂದಿದ್ದು, ಮೃತನ ಸಂಬಂಧಿಕರಿಂದ ಮಾಹಿತಿ ಪಡೆದ ಬಳಿಕ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿತ್ತು. ಈ ವೇಳೆ ಅಪರಿಚಿತ ವ್ಯಕ್ತಿ ಕಚೇರಿ ಮೇಲಿಂದ ಬಿದ್ದು ಮೃತಪಟ್ಟಿದ್ದ. ವಿಚಾರ ತಿಳಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಮೃತ ವ್ಯಕ್ತಿ ಬಿಹಾರದ ಜಾರ್ಖಂಡ್ ಮೂಲದ ಪ್ರೇಮ್ (28) ಎಂದು ಗುರುತಿಸಲಾಗಿತ್ತು. ಆತನ ಬಳಿಯಿದ್ದ ಮೊಬೈಲ್ ಮೂಲಕ ಸಂಬಂಧಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು.
ಇಲ್ಲಿ ಏಕೆ ಬಂದಿದ್ದ? ಮಂಗಳೂರಿನಲ್ಲಿ ಒಣ ಹಣ್ಣುಗಳನ್ನು ಪ್ಯಾಕ್ ಮಾಡುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್, ಭಾನುವಾರ ಮಂಗಳೂರಿಗೆ ತೆರಳುವುದಾಗಿ ಪಾಲಕರಿಗೆ ತಿಳಿಸಿ ಜಾರ್ಖಂಡ್‌ನಿಂದ ಹೊರಟಿದ್ದ ಎನ್ನಲಾಗಿದೆ. ಆದರೆ ಹೊಸಕೋಟೆಗೆ ಬಂದಿದ್ದ ಆತ ಯಾರನ್ನು ಭೇಟಿ ಮಾಡಿದ್ದ, ಯಾವ ವಿಚಾರಕ್ಕೆ ಇಲ್ಲಿಗೆ ಬಂದಿದ್ದ? ತಾಲೂಕು ಕಚೇರಿ ಮೇಲಿಂದ ಬೀಳಲು ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತನ ಕಡೆಯವರು ಜಾರ್ಖಂಡ್‌ನಿಂದ ಆ.17ರಂದು ಹೊಸಕೋಟೆ ಬರಲಿದ್ದಾರೆ. ಅವರಿಂದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿದೆ.