

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ, ಆರೋಗ್ಯ, ನಡೆ ನುಡಿಯಲ್ಲಿ ಶಿಸ್ತಿನ ಜತೆ ಸಾಮಾಜಿಕ ಕಳಕಳಿ ಹೊಂದಿರಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ತಾಲೂಕಿನ ಉಪ್ಪಾರಹಳ್ಳಿ ಎಂವಿಕೆ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ, ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಪಠ್ಯಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಹಂತದಲ್ಲಿ ಮಕ್ಕಳಿಗೆ ಜೀವನದ ಮೌಲ್ಯಗಳನ್ನು ಕಲಿಸುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವ ಜತೆಗೆ ಅಭಿವೃದ್ಧಿ ಹೊಂದಲು ಸಾಧ್ಯ. ಮಕ್ಕಳಲ್ಲಿ ವಿವಿಧ ಕಲೆ ಕೌಶಲ್ಯಗಳನ್ನು ಈಗಿನಿಂದಲೇ ಗುರುತಿಸಿ, ಅದಕ್ಕನುಗುಣವಾದ ಮುಂದಿನ ಗುರಿ ರೂಪಿಸಿಕೊಳ್ಳುವ ವೇದಿಕೆ ನಿರ್ಮಾಣ ಮಾಡಿಕೊಡಬೇಕಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅಪಘಾತ ಹೊಂದಿದವರಿಗೆ, ಮಾರಣಾಂತಿಕ ಖಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುವವರಿಗೆ, ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಇಂದಿನ ಆರೋಗ್ಯವಂತ ಯುವ ಪೀಳಿಗೆ ರಕ್ತದಾನ ಮಾಡಲು ಮುಂದಾಗುವ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದರು.
ಎಂವಿಕೆ ಶಾಲೆಯ ಸಂಸ್ಥಾಪಕ ಸಿ.ಮುನಿಯಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಕಡಿಮೆ ಇರುವುದರಿಂದ ಉಚಿತ ತಪಾಸಣೆ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ 75 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಎಂವಿಜೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಮೋದ್, ಗ್ರಾಪಂ ಸದಸ್ಯೆ ಬಿಂದು, ಮುಖಂಡರಾದ ಎಚ್.ಜೆ.ಶ್ರೀನಿವಾಸ್, ಎಲ್‌ಆರ್‌ಟಿ ಮಂಜುನಾಥ್, ಶಾಲಾ ಮುಖ್ಯಶಿಕ್ಷಕಿ ಕಲಾವತಿ ಮತ್ತಿತರರಿದ್ದರು.