ಹೊಸಕೋಟೆ ಕ್ರೀಡಾಂಗಣದಲ್ಲಿ ಮೊಳಗಿದ ಜಯೋಷ, ಸಚಿವ ಎಂಟಿಬಿ ನಾಗರಾಜ್‌ರಿಂದ ಜಾಥಾಗೆ ಚಾಲನೆ

18cfd809-454e-4e19-a410-cbffaae98c7a
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ತಾಲೂಕು ಕ್ರೀಡಾಂಗಣ ಶನಿವಾರ ತ್ರಿವರ್ಣಮಯವಾಗಿತ್ತು, ಸಾವಿರಾರು ವಿದ್ಯಾರ್ಥಿಗಳ ಭಾರತಾಂಭೆಗೆ ಜೈ, ಜೈಹಿಂದ್, ವಂದೇ ಮಾತರಂ ಜಯೋಷ ಮೊಳಗಿತು. ರಾಜಬೀದಿಗಳಲ್ಲಿ ತ್ರಿವರ್ಣ ಧ್ವಜಹಿಡಿದು ಸಾಗಿದ ವಿದ್ಯಾರ್ಥಿಗಳ ಶಿಸ್ತುಬದ್ಧ ನಡಿಗೆಯನ್ನು ನೆರೆದಿದ್ದ ಸಾವಿರಾರು ದೇಶಾಭಿಮಾನಿಗಳ ಕಣ್ತುಂಬಿಕೊಂಡರು.


ನಗರದ ಪ್ರತಿ ಕಟ್ಟಡಗಳ ಮೇಲೂ ರಾಷ್ಟ್ರಧ್ವಜದ ಹಾರಾಟ ಗಮನ ಸೆಳೆಯಿತು. ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ ಘರ್‌ಘರ್ ತಿರಂಗಾ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದ ಸಚಿವರು ಜಯೋಷ ಕೂಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.


ತ್ಯಾಗ ಬಲಿದಾನದಿಂದ ಬಂದ ಸ್ವಾತಂತ್ರ್ಯ: ಸಾಕಷ್ಟು ಮಹನೀಯರು, ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರನ್ನೆಲ್ಲ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಶನಿವಾರ ಹರ್‌ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಎಂಬ ವಾಕ್ಯದಡಿ ಆಚರಣೆ ಮಾಡುತ್ತಿದ್ದು ದೇಶದ ಪ್ರತಿ ನಾಗರೀಕರು ಹರ್ ಘರ್ ತಿರಂಗಾ ಆಚರಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಲೆಕ್ಕವಿಲ್ಲದಷ್ಟು ಮಹನೀಯರು ಪ್ರಾಣವನ್ನೇ ಅರ್ಪಣೆ ಮಾಡಿದ್ದಾರೆ. ಅವರೆಲ್ಲರ ಸ್ಮರಣೆ ಜತೆಗೆ 75 ವರ್ಷ ಪೂರೈಸಿ ಅಮೃತ ಮಹೋತ್ಸವದಲ್ಲಿರುವ ಈ ಸಂದರ್ಭವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸಬೇಕು ಎಂದರು. ಮನೆಮನೆಯಲ್ಲೂ3 ದಿನ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಕ್ಕೆ ಬಲಿದಾನ ಮಾಡಿದವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂಬುದು ಸರ್ಕಾರದ ಸಂದೇಶವಾಗಿದೆ ಎಂದರು.


ವೀರ ಸೇನಾನಿಗಳಿಗೆ ನುಡಿನಮನ: ಸತ್ಯ ಧರ್ಮ, ಸಾಮಾಜಿಕ ನ್ಯಾಯ, ಪ್ರಗತಿ, ಶಾಂತಿ, ಸಮಾನತೆ ಉಳಿಸಿ ಬೆಳೆಸಲು ಗಳಿಸಿದ ಸ್ವಾತಂತ್ರ್ಯ ಅನೇಕ ವೀರ ಸೇನಾನಿಗಳ ತ್ಯಾಗ ಬಲಿದಾನದಿಂದ ದಕ್ಕಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಅಂಥ ವೀರ ಸೇನಾನಿಗಳಿಗೆ ನುಡಿನಮನ ಸಲ್ಲಿಸಬೇಕಿದೆ ಎಂದು ಬಿಬಿಎಂಪಿ ಮಾಜಿ ಸದಸ್ಯ ನಿತೀಶ್‌ಪುರುಷೋತ್ತಮ್ ಹೇಳಿದರು.

ದೇಶದೆಲ್ಲೆಡೆ ಹರ್‌ಘರ್ ತಿರಂಗಾ ಅಭಿಯಾನ ನಡೆಯುತ್ತಿದ್ದು, ಭಾರತೀಯರಾದ ನಾವೆಲ್ಲರೂ ಒಂದೇ ಎಂದು ಸಾರಿ ಹೇಳುವ ಮಹತ್ವಪೂರ್ಣ ದಿನವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net