ಕೊಳಚೆ ನೀರಿನಿಂದ ಹೊಸಹೊಳಲು ಕೆರೆ ಮಲಿನ

IMG-20241224-WA0177
ಹೊಸಹೊಳಲು ದೊಡ್ಡ ಕೆರೆ ಪರಿಶೀಲನೆ ವೇಳೆ ಶಾಸಕ ಎಚ್.ಟಿ.ಮಂಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
Published on

ಕೆ.ಆರ್.ಪೇಟೆ : ಯುಜಿಡಿ ಕೊಳಚೆ ನೀರು ಹೊಸಹೊಳಲು ದೊಡ್ಡ ಕೆರೆ ಸೇರಿ ಮಲಿನವಾಗುತ್ತಿದೆ. ಆದರೂ ಅಧಿಕಾರಿಗಳು ಕಂಡು ಕಾಣದಂತೆ ಕುಳಿತ್ತಿದ್ದೀರಿ ಎಂದು ಸ್ಥಳ ಪರಿಶೀಲನೆ ವೇಳೆ ಸ್ಥಳದಲ್ಲಿದ್ದ ಪುರಸಭೆ ಅಧಿಕಾರಿಗಳನ್ನು ಶಾಸಕ ಎಚ್.ಟಿ.ಮಂಜು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಪುರಸಭೆಯು ಅವ್ಯವಹಾರಗಳ ತಾಣವಾಗಿದ್ದು ಖಾತೆಬದಲಾವಣೆ, ಯುಜಿಡಿ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳು ದಿನೇ ದಿನೆ ಬೃಹದಾಕಾರವಾಗುತ್ತಿದ್ದು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ಪುರಸಭಾ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪುರಸಭಾ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಯುಜಿಡಿ ಸಮಸ್ಯೆ ನಾಗರಿಕರ ಬಹಳ ದಿನಗಳ ಸಮಸ್ಯೆಯಾಗಿದ್ದು ಕೆಲಸ ಮುಗಿದಿದೆ ಎಂದು ಪುರಸಭಾ ಅಧಿಕಾರಿಗಳು ಮಾಹಿತಿ ನೀಡಿದ್ದೀರಿ. ಪಟ್ಟಣದ ಬಸವೇಶ್ವರ ನಗರ, ಸೆಂಟ್ ಮಾಥಾಸ್ ಶಾಲೆ, ಹೊಸಹೊಳಲು, ಜಯನಗರ ಬಡಾವಣೆ, ಎಲ್.ಐಸಿ ಮುಂತಾದ ಕಡೆಗಳಲ್ಲಿ ಯುಜಿಡಿ ತ್ಯಾಜ್ಯ ರಸ್ತೆಗೆ ಉಕ್ಕಿ ಹರಿಯುತ್ತಿದೆ. ಕೆಲವು ಕಡೆಗಳಲ್ಲಿ ಮನೆಯ ಅಂಗಳದೊಳಕ್ಕೂ ಹೋಗುತ್ತಿದೆ. ಈ ತ್ಯಾಜ್ಯ ಕಾಗುಂಡಿ ಹಳ್ಳದ ಮೂಲಕ ಹೊಸಹೊಳಲು ಕೆರೆ ಸೇರುತ್ತಿದ್ದು ಇಲ್ಲಿಂದ ಕೆ.ಆರ್.ಎಸ್ ಸೇರುತ್ತಿದೆ. ಸಾವಿರಾರು ಜನರು ಬಳಸಿ ಉಪಯೋಗಿಸಿದ ರಾಸಾಯನಿಕ ಮಿಶ್ರಿತ ತ್ಯಾಜ್ಯದ ನೀರನ್ನು ಪರೋಕ್ಷವಾಗಿ ಕುಡಿಯಲಾಗುತ್ತಿದೆ. ಕೂಡಲೇ ಯುಜಿಡಿ ಸಮಸ್ಯೆಯನ್ನು ಸಮರ್ಪಕವಾಗಿ ವಿಲೇ ಮಾಡಲೇ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಳಿಗೆಗಳನ್ನು ಹರಾಜು ಮಾಡಿ: ಪುರಸಭಾ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದ್ದು, ಹಲವಾರು ವರ್ಷಗಳಿಂದಲೂ ಬಾಡಿಗೆ ಕರಾರನ್ನು ನವೀಕರಿಸಿ ಪ್ರತಿವರ್ಷ ಸಮರ್ಪಕವಾಗಿ ಹರಾಜು ಮಾಡದೇ ಪ್ರಭಾವಿಗಳಿಗೆ ಮಣೆ ಹಾಕುತ್ತಿರುವುದು ಸಮರ್ಪಕವಾದುದಲ್ಲ. ಕೂಡಲೇ ಪುರಸಭಾ ಕಾನೂನಿನ ಅನ್ವಯ ಪ್ರತಿವರ್ಷ ಮಳಿಗೆಗಳನ್ನು ಬಹಿರಂಗ ಹರಾಜು ಮಾಡುವ ಮೂಲಕ ಪಾರದರ್ಶಕವಾಗಿ ನಿರ್ವಹಣೆ ಮಾಡಬೇಕು ಎಂದರು.

ಖಾತೆ ಬದಲಾವಣೆ ಸಮಸ್ಯೆ: ಪುರಸಭಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಾರ್ವಜನಿಕರ ಸ್ವತ್ತಿನ ಖಾತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದು ಕಂಡುಬಂದಿದೆ. ಯಾರೋ ಬರೆದ ಅರ್ಜಿಯ ಮೂಲಕ ಯಾವುದೇ ದಾಖಲೆಗಳನ್ನು ನೀಡದಿದ್ದರೂ ಯಾರ ಹೆಸರಿಗೆ ಬೇಕೋ ಅವರ ಹೆಸರಿಗೆ ವರ್ಗಾಯಿಸಲಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಮನಸೋಇಚ್ಛೆ ದಾಖಲೆಗಳನ್ನು ತಿರುಚಲಾಗಿದೆ. ಇದರಿಂದ ಅರ್ಹರಿಗೆ ಅನನುಕೂಲವಾಗಿದೆ ಜನರಿಗೆ ಅನುಕೂಲ ಮಾಡಿಕೊಡಲು ಕಾನೂನು ಅಡ್ಡ ಬರುತ್ತವೆ. ಅನನುಕೂಲ ಮಾಡಲು ಯಾವುದೇ ಕಾನೂನುಗಳು ಅಡ್ಡ ಬರುವುದಿಲ್ಲ ಅಲ್ಲವೆ? ಮುಖ್ಯಾಧಿಕಾರಿಗಳು ಈ ಬಗ್ಗೆ ಸಮರ್ಪಕವಾದ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ಆನಂದ್ ವಿರುದ್ಧ ಆಕ್ರೋಶ: ಯುಜಿಡಿ ಕೊಳಚೆ ನೀರು ಹೊಸಹೊಳಲು ಕೆರೆ ಸೇರುತ್ತಿರುವ ಹಿನ್ನೆಲೆ ಸ್ಥಳ ಪರಿಶೀಲನೆಗೆ ಬರುವುವಂತೆ ಸೂಚಿಸಿದರೂ ನೀರಾವರಿ ಇಲಾಖೆ ಎಇಇ ಆನಂದ್ (ಪ್ರಭಾರ ಇಇ) ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಬೇಜವಾಬ್ದಾರಿ ತೋರಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಇವರ ವಿರುದ್ಧ ಕ್ರಮ ವಹಿಸುವಂತೆ ಮೇಲಧಿಕಾರಿಗಳಿಗೆ ಸೂಚನೆ ನೀಡಿದರು.

ಯುಜಿಡಿ ವಿಚಾರದಲ್ಲಿ ಬೇಜವಾಬ್ದಾರಿ ತೋರಿರುವ ಪುರಸಭೆ, ನೀರಾವರಿ ಮತ್ತು ಒಳಚರಂಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳದಲ್ಲಿದ್ದ ಪರಿಸರ ಇಲಾಖೆಯ ಎಇಇ ಅಶ್ವಿನಿಗೆ ಶಾಸಕ ಮಂಜು ಸೂಚನೆ ನೀಡಿದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ತಾಪಂ ಇಒ ಸುಷ್ಮಾ, ಪುರಸಭಾ ಮುಖ್ಯಾಧಿಕಾರಿ ನಟರಾಜು, ಎಇ ಬಸವೇಗೌಡ, ನೀರಾವರಿ ಇಲಾಖೆ ಎಇಇ ಚಂದ್ರೇಗೌಡ, ಒಳಚರಂಡಿ ಇಲಾಖೆ ಎಇಇ ನದಾಫ್ ಸೇರಿದಂತೆ ಹಲವಾರು ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net