

ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ ದೇವಾಲಯದಲ್ಲಿ ಹೂವಿನ ಅಲಂಕಾರ, ವಿಶೇಷ ಪೂಜೆ ನೆರವೇರಿತು. ಮಧ್ಯಾಹ್ನ ಅಲಂಕಾರಗೊಂಡ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಗಳನ್ನು ಅರ್ಚಕರ ಮನೆಗೆ ಕರೆ ತಂದು ಪ್ರಸಾದ ಪೂಜೆ ಸಲ್ಲಿಸಲಾಯಿತು.
ಸಂಜೆ ತೇರಿನ ಗಾಲಿಗೆ ಎಲೆ- ಬಾನ ಹಾಕಿ, ವಿವಿಧ ಕಲಾ- ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕರೆ ತಂದ ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿಸಿ ರಥವನ್ನು ಎಳೆಯಲಾಯಿತು. ಭಕ್ತರು ತೇರಿನ ಚಕ್ರಕ್ಕೆ ಇಡಿಗಾಯಿ ಒಡೆದು ಕಳಸಕ್ಕೆ ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.