ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಿದ ಶಿಕ್ಷಕರು

22knk3
Published on

ಕನಕಗಿರಿ: ತಾಲೂಕಿನ ಹೊಸಗುಡ್ಡದ ಸಕಿಪ್ರಾ ಶಾಲೆಗೆ ಎರವಲು(ಡೆಪ್ಟೇಶನ್) ಆಗಿ ಕಾರ್ಯನಿರ್ವಹಿಸಲು ಬಂದ ಶಿಕ್ಷಕರಿಬ್ಬರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮುಂದಾಗಿದ್ದಾರೆ. ಇದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತೇಜನ ನೀಡಿದಂತಾಗಿದೆ.


ಬಡ್ತಿಯಾಗಿ ಶಿಕ್ಷಕರು ವರ್ಗಾವಣೆ ಆದ ಹಿನ್ನೆಲೆ ಹೊಸಗುಡ್ಡ ಶಾಲೆಯಲ್ಲಿ ಕಳೆದ 3 ವರ್ಷಗಳಿಂದ ಖಾಯಂ ಶಿಕ್ಷಕರಿಲ್ಲ. ಎರವಲು ಸೇವೆಯ ಮೇಲೆ ತೆರಳಿದ ಈರಣ್ಣ ಶಾಲೆ ಮುನ್ನಡೆಸುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಸಹ ಶಿಕ್ಷಕ ಮಹೇಶ ಡೆಪ್ಟೇಶನ್ ಮೇಲೆ ಬಂದಿದ್ದಾರೆ. ಇವರಿಬ್ಬರ ಜತೆಗೆ ಅತಿಥಿ ಶಿಕ್ಷಕರೊಬ್ಬರು ಸೇರಿ ಈರಣ್ಣರಿಗೆ ಕಲಿಕಾ ಮಟ್ಟ ಸುಧಾರಿಸಲು ಕೈ ಜೋಡಿಸಿದ್ದಾರೆ. ಶಾಲೆಗೆ ಖಾಯಂ ಶಿಕ್ಷಕರ ಕೊರತೆಯನ್ನು ನೀಗಿಸಲು ಮುಂದಾಗಿದ್ದಾರೆ.


ಶಾಲೆಯಲ್ಲಿನ 78 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರು ಕಲಿಕಾ ಗುಣಮಟ್ಟತೆ ಕಾಪಾಡಲು ಸಾಮಾನ್ಯ ಜ್ಞಾನ, ಸಮಾನಾರ್ಥಕ ಪದ, ಗಣಿತದ ಆಕೃತಿಗಳು, ಕನ್ನಡ ಒತ್ತಕ್ಷರ, ಆಂಗ್ಲ ಭಾಷೆ ಜ್ಞ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳನ್ನು ಬಿಡಿಸಿದ್ದಾರೆ. ಹಾಳೆ, ಡ್ರಾಯಿಂಗ್ ಶೀಟ್, ಥರ್ಮ್‌ಕೋಲ್‌ನಲ್ಲಿ ಬೇಕಾದ ಬೋಧನೋಪಕರಣಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.


ಶಿಕ್ಷಕರು ಕೇವಲ ಶೈಕ್ಷಣಿಕ ವಾತಾವರಣ ಸೃಷ್ಟಿಸುವುದಕ್ಕೆ ಸಿಮೀತವಾಗಿಲ್ಲ. ಜತೆಗೆ ಶಾಲೆಯಲ್ಲಿನ ವಿದ್ಯಾರ್ಥಿಗಳು ಕುಳಿತು ಊಟ ಮಾಡಲು ಶಿಕ್ಷಕ ಈರಣ್ಣ ಅವರು ಸ್ವಂತ ವೆಚ್ಚದಲ್ಲಿ ಶಹಬಾದ್ ಬಂಡಿಯಲ್ಲಿ ಡೈನಿಂಗ್ ಟೇಬಲ್ ನಿರ್ಮಿಸಿದ್ದಾರೆ. ಅಲ್ಲದೆ ದಾನಿಗಳ ಸಹಾಯದಿಂದ ಶಾಲೆಗೆ ನಾಮಫಲಕ ಬರೆಸಿದ್ದಾರೆ.


ಮೂಲ ಸೌಕರ್ಯ ಕೊರತೆ: ಶಾಲೆಯು ಮೂಲ ಸೌಲಭ್ಯಗಳ ಸಮಸ್ಯೆ ಎದುರಿಸುತ್ತಿದೆ. ಕಾಂಪೌಂಡ್, ಶೌಚಗೃಹ ನಿರ್ಮಿಸಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನಕೂಲವಾಗಲಿದೆ ಎನ್ನುವುದು ಶಿಕ್ಷಕರ ಮಾತಾಗಿದೆ.


ಕಂಗೊಳಿಸುತ್ತಿರುವ ಹಸಿರು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವ್ಯವಸ್ಥೆಯ ಜತೆಗೆ ಶಾಲೆಯು ಹಸಿರಿನಿಂದ ಕಂಗೊಳಿಸುವಂತಾಗಿದೆ. ತೆಂಗು, ಬಾದಾಮಿ, ಅರಳೆ, ಬೇವು ಸಹಿತ ನಾನಾ ಮರಗಳನ್ನು ಬೆಳೆಸುತ್ತಿದ್ದು, ಅಲಂಕಾರಿಕ ಸಸ್ಯಗಳನ್ನು ನೆಡಲು ಶಿಕ್ಷಕರು ಈಗಾಗಲೇ ಕುಂಡಗಳನ್ನು ತಂದು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net