

ಯೋಗೀಶ್ ಎಂ.ಮೇಟಿಕುರ್ಕೆ ಹೊಸದುರ್ಗ: ಕರೊನಾ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಹಾಗೂ ರೋಗದ ಕುರಿತು ಜಾಗೃತಿ ಮೂಡಿಸಲು ತಾಲೂಕಿನ ಹಳ್ಳಿಗಳಲ್ಲಿ ಕರೊನಾ ತಡೆ ಕಾರ್ಯಪಡೆ ರಚಿಸುವ ಮೂಲಕ ಆರೋಗ್ಯ ಮತ್ತು ಪಂಚಾಯತ್ ರಾಜ್ ಇಲಾಖೆ ಮಾದರಿ ಕೆಲಸ ಮಾಡುತ್ತಿವೆ.
33 ಗ್ರಾಪಂ ಮಟ್ಟದಲ್ಲಿ ಕಾರ್ಯಪಡೆಗಳನ್ನು ರಚಿಸಲಾಗಿದೆ. ಗ್ರಾಪಂ ಸದಸ್ಯರು, ಪಿಡಿಒ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬೀಟ್ ಪೊಲೀಸರು, ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿಗಳು ಕಾರ್ಯ ಪಡೆಯಲ್ಲಿದ್ದಾರೆ.
ಆರೋಗ್ಯ ಸ್ಥಿತಿಗತಿ, ಶಂಕಿತರ ಪತ್ತೆ, ಹೊರ ಜಿಲ್ಲೆಯಿಂದ ಬಂದವರ ಪತ್ತೆ, ಕ್ವಾರಂಟೈನ್ ಜವಾಬ್ದಾರಿ ನಿರ್ವಹಿಸುವ ಜತೆಗೆ ರೋಗದ ಕುರಿತು ಜಾಗೃತಿ, ಆರೋಗ್ಯ ಶಿಕ್ಷಣ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ ಕುರಿತು ತಿಳಿಸುವುದು. ಲಾಕ್‌ಡೌನ್ ನಿಯಮಗಳ ಪಾಲನೆಯ ಮೇಲ್ವಿಚಾರಣೆ ಮಾಡುತ್ತಿದೆ.
ಹೊರ ರಾಜ್ಯ ಹಾಗೂ ಅನ್ಯ ಜಿಲ್ಲೆಯ ಜನರನ್ನು ಗುರುತಿಸಿ ಸೀಲ್ ಹಾಕುವ ಕೆಲಸವನ್ನು ಗ್ರಾಮ ಮಟ್ಟದ ಕಾರ್ಯಪಡೆ ಸದಸ್ಯರು ಮಾಡುತ್ತಿದ್ದಾರೆ. ಪ್ರತಿ ದಿನ ಒಂದು ಗಂಟೆಯವರೆಗೆ ಅವರ ಚಲನವಲನ, ಆರೋಗ್ಯ ಸ್ಥಿತಿಯ ಮಾಹಿತಿ ಪಡೆದು ಮಧ್ಯಾಹ್ನ 2 ಗಂಟೆಯೊಳಗೆ ಉಪ ಕೇಂದ್ರಗಳ ಮೂಲಕ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಮಾಹಿತಿ ಒದಗಿಸುತ್ತಿದೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ತಾಲೂಕಿನಲ್ಲಿ ವಿಕೇಂದ್ರಿಕೃತ ವ್ಯವಸ್ಥೆಯಡಿಯಲ್ಲಿ ಕಾರ್ಯಪಡೆಗಳ ರಚನೆ ಹೊಸದುರ್ಗದಲ್ಲಿ ಮಾಡಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ ಹೇಳಿಕೆ: ಕರೊನಾ ಸೋಂಕು ತಾಲೂಕಿಗೆ ಕಾಲಿಡದಂತೆ ತಡೆಯುವ ಉದ್ದೇಶದಿಂದ ಗ್ರಾಮಗಳ ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಕೆಲಸ ಮಾಡಲಾಗುತ್ತಿದೆ. ಸಾರ್ವಜನಿಕರು ಹಾಗೂ ಸಿಬ್ಬಂದಿಯ ಸಹಕಾರದಿಂದ ಉತ್ತಮ ಕೆಲಸ ಮಾಡಲಾಗುತ್ತಿದೆ.