ಹೊಸದುರ್ಗ ಪಟ್ಟಣದಲ್ಲಿ ಕೌಮಾರಿ ಪೂಜೆ, ಮಹಾ ಚಂಡಿಕಾಯಾಗ

hsd home
ಹೊಸದುರ್ಗದ ದುರ್ಗಾದೇವಿ ಮಂಟಪದಲ್ಲಿ ಮಂಗಳವಾರ ದುರ್ಗಾಷ್ಟಮಿ ಅಂಗವಾಗಿ ಮಹಾ ಚಂಡಿಕಾ ಯಾಗ ನಡೆಸಲಾಯಿತು.
Published on

ಹೊಸದುರ್ಗ: ಪಟ್ಟಣದ ದುರ್ಗಾದೇವಿ ಮಂಟಪದಲ್ಲಿ ಎಂಟನೇ ವರ್ಷದ ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ದುರ್ಗಾಷ್ಟಮಿ ಅಂಗವಾಗಿ ಮಂಗಳವಾರ ಕೌಮಾರಿ ಪೂಜೆ ಹಾಗೂ ಮಹಾ ಚಂಡಿಕಾಯಾಗ ನೆರವೇರಿತು.

ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ಷೋಡಶೋಪಚಾರ ಪೂಜೆ, ಲಲಿತಾ ಸಹಸ್ರನಾಮ ಪಠಣ, ದುರ್ಗಾ ಸ್ತುತಿ, ಮಹಾ ಮಂಗಳಾರತಿ, ಮಹಾ ನೈವೇದ್ಯ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.

ದುರ್ಗಾದೇವಿ ಪ್ರತಿರೂಪ ಎಂದು ಭಾವಿಸಿ ಎಂಟು ವರ್ಷದ ಒಳಗಿರುವ 108 ಬಾಲಕಿಯರನ್ನು ದೇವಿಯ ಸನ್ನಿಧಿಯಲ್ಲಿ ಕುಳ್ಳಿರಿಸಿ ಷೋಡಶೋಪಚಾರ ಪೂಜೆ ಸಲ್ಲಿಸುವ ಮೂಲಕ ಕೌಮಾರಿ ಪೂಜೆ ನಡೆಸಲಾಯಿತು.

ವಿಶೇಷ ಸಾಂಪ್ರದಾಯಕ ಪೋಷಾಕು ಧರಿಸಿದ್ದ ಕಿಶೋರಿಯರನ್ನು ದುರ್ಗಾದೇವಿ ಮಂಟಪಕ್ಕೆ ಆಹ್ವಾನಿಸಿ ಸೇವಾ ಸಮಿತಿ ಅಧ್ಯಕ್ಷ ಟಿ. ಮಂಜುನಾಥ್ ಹಾಗೂ ಸದಸ್ಯರು ಮಕ್ಕಳಿಗೆ ಪೂಜೆ ಸಲ್ಲಿಸಿ ಫಲ ತಾಂಬೂಲ, ವಿಶೇಷ ಉಡುಗೊರೆ ನೀಡಿ ಸತ್ಕರಿಸಿದರು. ಹಾಜರಿದ್ದ ಭಕ್ತರು, ಬಾಲಕಿಯರಿಗೆ ನಮಿಸಿ ಭಕ್ತಿಸಮರ್ಪಿಸಿದರು.

ಕೌಮಾರಿ ಪೂಜೆ ನಂತರ ಕೃಷ್ಣಮೂರ್ತಿ ಘನಪಾಠಿ ನೇತೃತ್ವದಲ್ಲಿ ಮಹಾ ಚಂಡಿಕಾಯಾಗ ನಡೆಸಲಾಯಿತು. ಯಾಗಕ್ಕಾಗಿ ನಿರ್ಮಿಸಿದ್ದ ಬೃಹತ್ ಅಗ್ನಿಕುಂಡದಲ್ಲಿ ವೇದ ಮಂತ್ರ ಪಠಿಸಿ ಹವಿಸ್ಸನ್ನು ಸಮರ್ಪಿಸಲಾಯಿತು. ಮಾದಲ ಫಲ ಸೇರಿ 108 ಗಿಡಮೂಲಿಕೆ, ಸುಗಂಧ ದ್ರವ್ಯ, ರೇಷ್ಮೆ ವಸ್ತ್ರ ಸೇರಿದಂತೆ ವಿವಿಧ ದ್ರವ್ಯಗಳನ್ನು ಭಕ್ತರು ಹೋಮಕ್ಕೆ ಸಮರ್ಪಿಸಿದರು. ಮಧ್ಯಾಹ್ನ ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.

ದುರ್ಗಾಪರಮೇಶ್ವರಿ ಅಮ್ಮನವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಮಂಟಪವನ್ನು ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ಪೂಜಾ ಕಾರ್ಯಕ್ರಮಗಳ ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.

ಶಾಸಕ ಬಿ.ಜಿ. ಗೋವಿಂದಪ್ಪ, ರಾಜ್ಯ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ, ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಆನಂದ್, ಉಪಾಧ್ಯಕ್ಷೆ ಗೀತಾ ಗಜೇಂದ್ರ, ಪಿಐ ರಮೇಶ್‌ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ದುರ್ಗಾಷ್ಟಮಿ ಅಂಗವಾಗಿ ಉತ್ತಮ ಮಳೆ, ಬೆಳೆ ಹಾಗೂ ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿ ಮಹಾ ಚಂಡಿಕಾಯಾಗ ಹಾಗೂ ಕೌಮಾರಿ ಪೂಜೆ ನೆರವೇರಿಸಲಾಯಿತು. ಗುರುವಾರ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಅಮ್ಮನವರ ರಾಜಬೀದಿ ಉತ್ಸವ ನಡೆಯಲಿದೆ. ಟಿ. ಮಂಜುನಾಥ್, ದುರ್ಗಾದೇವಿ ದಸರಾ ಸೇವಾ ಸಮಿತಿ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net