ಸಮಾಜಮುಖಿ ಬದುಕು ಸಾರ್ಥಕ

HSD darmika samaramba 15 p1
Published on

ಹೊಸದುರ್ಗ: ಆತ್ಮ ಕಲ್ಯಾಣದ ಜತೆಗೆ ಸಮಾಜದ ಹಿತಕ್ಕಾಗಿ ಸ್ವಾರ್ಥವಿಲ್ಲದೆ ಬದುಕುವವರು ಮಾತ್ರ ಸಿದ್ಧಪುರುಷರಾಗಲು ಸಾಧ್ಯ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

ತಾಲೂಕಿನ ನಾಗತಿಹಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸಿದ್ಧಪುರುಷರ ಜಯಂತಿ ಹಾಗೂ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಆತ್ಮ ಕಲ್ಯಾಣದಲ್ಲಿ ತೊಡಗಿಕೊಂಡಿದ್ದ ಸನ್ಯಾಸಿಗಳು ಪ್ರಸ್ತುತ ಕಾಲಾಮಾನದಲ್ಲಿ ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಲೌಕಿಕ ಕಲ್ಯಾಣದಲ್ಲಿ ತೊಡಗಿಕೊಂಡವರಲ್ಲಿ ಲೋಪಗಳು ಹೆಚ್ಚಾಗಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಜನರ ಮನಸ್ಥಿತಿ ಬದಲಾಗಿದೆ. ಮನುಷ್ಯರನ್ನು ವಸ್ತುಗಳಂತೆ ಬಳಸಿಕೊಂಡು ಬಿಸಾಕುವ ವರ್ತನೆ ಹೆಚ್ಚಾಗಿದೆ ಎಂದರು.

ಭೂಮಿಯ ಮೇಲಿರುವ ಪ್ರತಿ ಜೀವಿಯಲ್ಲೂ ಪರಮಾತ್ಮನ ಸಾನ್ನಿಧ್ಯವಿದೆ. ಅಂತರಾತ್ಮ ಹಾಗೂ ಪರಮಾತ್ಮನ ಸಾಕ್ಷಾತ್ಕಾರದಿಂದ ಪರಿಪೂರ್ಣವಾದ ಬದುಕು ಸಾಧ್ಯವಾಗುತ್ತದೆ. ಧಾರ್ಮಿಕ ಮನೋಭಾವನೆಗಳು ಮನಸ್ಸು ಹಾಗೂ ಬದುಕಿಗೆ ಶಾಂತಿ ನೀಡುತ್ತವೆ. ಬದುಕಿನ ಪ್ರತಿಯೊಂದ ಕ್ಷಣವನ್ನು ನೆಮ್ಮದಿಯಾಗಿ ಕಳೆಯುವ ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಬಿಇಒ ಎಲ್.ಜಯಪ್ಪ ಮಾತನಾಡಿ, ಮನುಷ್ಯನ ಬದುಕಿನಲ್ಲಿ ಅಧ್ಯಾತ್ಮದ ಅವಶ್ಯಕತೆ ಹೆಚ್ಚಾಗಿದೆ. ತಪ್ಪುಗಳನ್ನು ತಿದ್ದಲು ಬದುಕಿಗೆ ಸೂಕ್ತ ಮಾರ್ಗದರ್ಶನ ಮಾಡಲು ಗುರುವಿನ ಸಾನ್ನಿಧ್ಯ ಅವಶ್ಯ ಎಂದರು.

ಗ್ರಾಪಂ ಅಧ್ಯಕ್ಷೆ ಶೀಲಾ ವಿರೂಪಾಕ್ಷಪ್ಪ, ಕುಂಚಿಟಿಗ ಸಮಾಜದ ಅಧ್ಯಕ್ಷ ಕೆ.ಸಿ.ಸಿದ್ದಪ್ಪ, ತಾಪಂ ಸದಸ್ಯೆ ಯಶೋದಮ್ಮ, ಶಿವಪ್ಪ, ವಿಜಯಲಕ್ಷ್ಮೀ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net