ಮತ್ತೆ ಕಲ್ಯಾಣದಿಂದ ವಿಚಾರ ಕ್ರಾಂತಿ

hsd sanehalli 10 p1
Published on

ಹೊಸದುರ್ಗ: ಮತ್ತೆ ಕಲ್ಯಾಣ ಅಭಿಯಾನದ ಮೂಲಕ ನಾಡಿನ 30 ಜಿಲ್ಲಾ ಕೇಂದ್ರಗಳಲ್ಲಿ ಬಸವಾದಿ ಶರಣರ ವಿಚಾರ ಕ್ರಾಂತಿಗಳನ್ನು ಬಿತ್ತುವ ಕೆಲಸ ಮಾಡಲಾಗಿದೆ ಎಂದು ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮತ್ತೆ ಕಲ್ಯಾಣ ಕಾರ್ಯಕ್ರಮ ಕುರಿತು ಸಂಪಾದಿತ 6 ಪುಸ್ತಕಗಳನ್ನು ಸಾಣೇಹಳ್ಳಿಯ ಶ್ರೀಮಠದ ಬಿದಿರು ವನದಲ್ಲಿ ಬುಧವಾರ ಬಿಡುಗಡೆ ಮಾಡಿ ಮಾತನಾಡಿದರು.

ಮತ್ತೆ ಕಲ್ಯಾಣದ ಸಂವಾದದಲ್ಲಿ ವ್ಯಕ್ತವಾದ ಹಲವು ಪ್ರಶ್ನೆಗಳು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿವೆ. ಅಭಿಯಾನದ ಯಶಸ್ಸಿಗೆ ವಿವಿಧ ಮಠಾಧೀಶರು ನೆರವು ನೀಡಿದ್ದಾರೆ. ತಮ್ಮ ಸ್ಥಾನಮಾನ, ಮಠ-ಪೀಠ, ಸಂಪ್ರದಾಯಗಳು ಭಿನ್ನವಾದರೂ ನಮ್ಮ ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದರು ಎಂದರು.

ವಿರೋಧ ಮಾಡಿದವರು ಬೆರಳೆಣಿಕೆಯಷ್ಟು ಮಾತ್ರ. ಸ್ವಾರ್ಥವನ್ನು ಬದಿಗಿಟ್ಟು, ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿದ್ದ ಎಲ್ಲ ವರ್ಗದ ಜನರೂ ಈ ಅಭಿಯಾನದ ಯಶಸ್ಸಿಗೆ ಸಮಾನ ಪಾತ್ರ ವಹಿಸಿದರು ಎಂದು ತಿಳಿಸಿದರು.

ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಚಿಂತನೆಗಳು ಬದುಕಿಗೆ ಬೆಳಕಾಗಬಲ್ಲವು. ಶರಣರ ಆಲೋಚನೆಗಳು ಎಲ್ಲ ಕಾಲಘಟ್ಟಕ್ಕೂ ದೇಶ, ಭಾಷೆಗಳನ್ನು ಮೀರಿದಂತೆ ಅನ್ವಯಿಸುವಂಥಹ ಶಕ್ತಿ ಹೊಂದಿವೆ. ಸ್ಥಾನಮಾನಗಳಿಗೆ ನಮ್ಮಿಂದ ಹೆಸರು ಬರಬೇಕೇ ಹೊರತು; ಸ್ಥಾನಮಾನಗಳಿಂದ ನಮಗೆ ಹೆಸರು ಬರುವಂತಾಗಬಾರದು ಎಂದರು

ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರು ಸಾಮಾಜಿಕ ವೈಪರೀತ್ಯಗಳನ್ನು ಸರಿಪಡಿಸುವ ಸಲುವಾಗಿ ಕಾಯಕ, ದಾಸೋಹದಂಥಹ ತತ್ವ-ಸಿದ್ಧಾಂತಗಳನ್ನು ನೀಡಿದರು. ಆದರೆ, ಇಂದಿಗೂ ಮುಂದುವರಿದಿರುವ ಅಸಮಾನತೆಯನ್ನು ಹೋಗಲಾಡಿಸಲು ವಿಚಾರಗಳನ್ನು ಜನರಿಗೆ ಮತ್ತೆ ಮತ್ತೆ ಮುಟ್ಟಿಸುವ ಉದ್ದೇಶದಿಂದ ಪಂಡಿತಾರಾಧ್ಯ ಶ್ರೀಗಳು ಅಭಿಯಾನ ರೂಪಿಸಿ ಯಶಸ್ವಿಯಾಗಿ ಮುನ್ನಡೆಸಿದರು ಎಂದು ತಿಳಿಸಿದರು.

ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳ ನೇತೃತ್ವದ ಮತ್ತೆ ಕಲ್ಯಾಣ ಅಭಿಯಾನ ನಾಡಿನ ಉದ್ದಗಲಕ್ಕೂ ಒಂದು ವಿಚಾರ ಕ್ರಾಂತಿ ಮೂಡಿಸಿದೆ ಎಂದರು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇತರರು ಉಪಸ್ಥಿತರಿದ್ದರು.

ಮದ್ಯ ಮಾರಾಟಕ್ಕೆ ಅವಕಾಶ ಸಲ್ಲ: ಮತ್ತೆ ಕಲ್ಯಾಣದ ವೇದಿಕೆಯಲ್ಲಿ ದಾಖಲಾದ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಆರು ಪುಸ್ತಕಗಳನ್ನು ಹೊರತರಲು ಲಾಕ್‌ಡೌನ್ ಸಮಯ ಸಹಕಾರಿಯಾಯಿತು ಎಂದು ಸಾಣೆಹಳ್ಳಿ ಶ್ರೀಗಳು ತಿಳಿಸಿದರು. ಲಾಕ್‌ಡೌನ್‌ನಿಂದ ವಾಯು, ಜಲ, ಶಬ್ದ ಮಾಲಿನ್ಯಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ಜನರ ಆರೋಗ್ಯದಲ್ಲಿ ಸುಧಾರಣೆಯಾಯಿತು. ಮದ್ಯ ಸಿಗದೆ ಮದ್ಯಪಾನಿಗಳ ಆರೋಗ್ಯ ಸುಧಾರಿಸಿ ಅವರ ಮುಖದಲ್ಲೂ ಕಳೆ ಬಂದಿತ್ತು. ಆದರೆ, ಸರ್ಕಾರ ಮತ್ತೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಬೇಸರದ ಸಂಗತಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net