ಸಿಡಿಲಿಗೆ ಮಹಿಳೆ, ಮರ ಬಿದ್ದು ಯುವಕ ಸಾವು

HSD VISIT 01
Published on

ಹೊಸದುರ್ಗ: ತಾಲೂಕಿನಲ್ಲಿ ಶುಕ್ರವಾರ ಸಂಜೆ ಗುಡುಗು, ಬಿರುಗಾಳಿ ಸಹಿತ ಮಳೆಗೆ ಸಿಲುಕಿ ಇಬ್ಬರು ಸಾವಿಗಿಡಾಗಿದ್ದು, ಅಪಾರ ಬೆಳೆ ಹಾನಿ ಆಗಿದೆ.

ಬಿರುಗಾಳಿಗೆ ಮನೆಗಳ ಚಾವಣಿಗಳು ಹಾರಿ ಹೋಗಿದ್ದು, ತೆಂಗಿನಮರಗಳು ಧರೆಗುರುಳಿವೆ. ಮಧುರೆ ಗ್ರಾಮದ ತೋಟದಲ್ಲಿ ಕೃಷಿ ಕಾಯಕದಲ್ಲಿ ತೊಡಗಿದ್ದ ಸದಾಶಿವಪ್ಪ ಅವರ ಪತ್ನಿ ಗೀತಮ್ಮ (42) ಸಿಡಿಲು ಬಡಿದು ಸಾವಿಗೀಡಾಗಿದ್ದರೆ, ಶ್ರೀರಾಂಪುರ ಹೋಬಳಿಯ ಅಲಘಟ್ಟ ಗ್ರಾಮದಲ್ಲಿ ಮಳೆಯಿಂದ ರಕ್ಷಿಸಲು ತೆಂಗಿನ ಮರದ ಕೆಳಗೆ ನಿಂತಿದ್ದ ಪರಮೇಶ್ವರಯ್ಯ ಅವರ ಮಗ ರೇಣುಕಯ್ಯ (38) ಅವರ ಮೇಲೆ ತೆಂಗಿನ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶ್ರೀರಾಂಪುರ ಹಾಗೂ ಕಸಬಾ ಹೋಬಳಿಗಳಲ್ಲಿ ಸುರಿದ ಮಳೆ ಹಾಗೂ ಬಿರುಗಾಳಿಗೆ ಅಪಾರ ಬೆಳೆ ಹಾನಿ ಆಗಿದೆ. ಕೊರಟಿಕೆರೆ ಗ್ರಾಮದಲ್ಲಿ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೂರಾರು ತೆಂಗಿನ ಮರಗಳು ನೆಲಕ್ಕೆ ಉರುಳಿವೆ.

ಮೃತ ಇಬ್ಬರ ಕುಟುಂಬಕ್ಕೆ ಹಾಗೂ ಬೆಳೆ ಹಾನಿ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಾತ್ಕಾಲಿಕ ಪರಿಹಾರ ನೀಡಿದರು. ಜತೆಗೆ ತಕ್ಷಣ ಸರ್ಕಾರಕ್ಕೆ ವರದಿ ನೀಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ತಿಪ್ಪೇಸ್ವಾಮಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net