ಸಣ್ಣಕ್ಕಿ ಬಾಗೂರಲ್ಲಿ ಭಕ್ತರಿಗೆ ಭೂವೈಕುಂಠ ದರ್ಶನ

hsd vaykunta ekadashi 06 p4
Published on

ಹೊಸದುರ್ಗ: ತಾಲೂಕಿನ ಸಣ್ಣಕ್ಕಿ ಬಾಗೂರು (ಭಾಗ್ಯಪುರಿ) ಗ್ರಾಮದ ಐತಿಹಾಸಿಕ ಪ್ರಸನ್ನ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಸೋಮವಾರ ವೈಕುಂಠ ಏಕಾದಶಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆಯಿಂದ ರಾತ್ರಿಯವರೆಗೂ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಶ್ರೀಸ್ವಾಮಿಯ ಭೂವೈಕುಂಠ ಸೇವಾ ದರ್ಶನ ಪಡೆದರು.

ಉತ್ಸವದ ನಿಮಿತ್ತ ಮುಂಜಾನೆಯಿಂದ ದೇವಾಲಯದಲ್ಲಿರುವ ಚನ್ನಕೇಶವ ಸ್ವಾಮಿ ಮೂಲಮೂರ್ತಿ ಹಾಗೂ ಉತ್ಸವ ಮೂರ್ತಿ, ಶ್ರೀ ವೈಕುಂಠ ನಾರಾಯಣ ಸ್ವಾಮಿ, ಮಹಾಲಕ್ಷ್ಮಿ ಅಮ್ಮನವರಿಗೆ ಸುಪ್ರಭಾತ ಸೇವೆ, ಮಹಾಭಿಷೇಕ, ತೋಮಾಲ ಸೇವೆ, ವಿಷ್ಣುಸಹಸ್ರನಾಮ ಪಾರಾಯಣ, ವೇದ ಪಾರಾಯಣ, ಅರ್ಚನೆ , ಮಹಾಪೂಜೆ, ಮಹಾಮಂಗಳಾರತಿ ಸೇವೆ ಸಲ್ಲಿಸಲಾಯಿತು.

ಶಂಕ, ಚಕ್ರ, ಪದ್ಮ ಹಾಗೂ ಗದೆಯನ್ನು ಹಿಡಿದಿರುವ ಚನ್ನಕೇಶವ ಮೂರ್ತಿ, ಭೂದೇವಿ, ಶ್ರೀದೇವಿಯರ ಉತ್ಸವ ಮೂರ್ತಿಗಳನ್ನು ದೇವಾಲಯದ ಉತ್ತರ ದ್ವಾರದ ಮೇಲ್ಭಾಗದಲ್ಲಿ ವೈಕುಂಠ ದ್ವಾರ ನಿರ್ಮಿಸಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಉತ್ತರದ ಬಾಗಿಲಿನಲ್ಲಿ ದೇವರ ಕೆಳಗೆ ನಿಂತ ಭಕ್ತಾದಿಗಳು ಶ್ರೀಸ್ವಾಮಿಯ ದರ್ಪಣ ದರ್ಶನ ಪಡೆದು ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸಿದರು.

ಕುಂಚಿಟಿಗ ಸಂಸ್ಥಾನದ ಡಾ.ಶ್ರೀ ಶಾಂತವೀರ ಸ್ವಾಮೀಜಿ, ಭಗೀರಥ ಸಂಸ್ಥಾನದ ಶ್ರೀ ಪುರುಪೋತ್ತಮಾನಂದಪುರಿ ಸ್ವಾಮೀಜಿ, ಕನಕ ಗುರುಪೀಠ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ತಹಸೀಲ್ದಾರ್ ತಿಪ್ಪೇಸ್ವಾಮಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ದೇವಾಲಯದ ಸಂಕೀರ್ಣ ಹಾಗೂ ಎಲ್ಲ ಬಾಗಿಲುಗಳನ್ನೂ ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಸಾಗುವ ದಾರಿಯಲ್ಲಿ ಬ್ಯಾರಿಕೇಡ್ ನಿರ್ಮಿಸಿ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರೆಲ್ಲರಿಗೂ ತಿರುಮಲದಿಂದ ಆಗಮಿಸಿ ವಿಶೇಷ ಬಾಣಸಿಗರು ತಯಾರಿಸಿದ್ದ ಲಡ್ಡು ಪ್ರಸಾದ ವಿತರಿಸಲಾಯಿತು. ದೇವಾಲಯ ಆವರಣದಲ್ಲಿ ದಾಸೋಹ ವ್ಯವಸ್ಥೆ ಸಹ ಮಾಡಲಾಗಿತ್ತು.

ವೈಕುಂಠ ನಾರಾಯಣ ಸ್ವಾಮಿ ದೇವಾಲಯ: ಚನ್ನಕೇಶವ ಸ್ವಾಮಿ ದೇವಾಲಯಕ್ಕೆ 800 ವರ್ಷಗಳ ಇತಿಹಾಸವಿದ್ದು ದೇವಾಲಯದ ಪ್ರಾಂಗಣದಲ್ಲಿರುವ ವೈಕುಂಠ ನಾರಾಯಣ ಸ್ವಾಮಿ ದೇವಾಲಯವು ದಕ್ಷಿಣ ಭಾರತದಲ್ಲಿಯೇ ಅಪರೂಪವಾಗಿದೆ. ಉತ್ತರಮುಖ ಹೊಂದಿರುವ ದೇಗುಲದಲ್ಲಿ ಲಕ್ಷ್ಮೀ ಸಮೇತವಾಗಿರುವ ನಾರಾಯಣಸ್ವಾಮಿಯ ಗರುಡಾರೂಢನಾಗಿರುವ ಮೂರ್ತಿಯು ಉತ್ತರಾಭಿಮುಖಿಯಾಗಿರುವುದು ಇಲ್ಲಿನ ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net