

ಹೊಸದುರ್ಗ: ತಾಲೂಕಿನಲ್ಲಿ ಸಾರ್ವಜನಿಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದ್ದು, ಹೋರಾಟ ನಡೆಸಲಾಗುವುದು ಎಂದು ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವೇ ಕರೊನಾ ಸಂಕಷ್ಟಕ್ಕೆ ಸಿಲುಕಿರುವಾಗ ತಾಲೂಕಿನಲ್ಲಿ ಮಾತ್ರ ರಾಜಕೀಯ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡುವ ವಿಚಾರದಲ್ಲಿ ತಾಲೂಕಿನ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸದೇ ವಿವೇಚನಾ ರಹಿತವಾಗಿ ನಡೆದುಕೊಂಡಿದ್ದಾರೆ.
ತಂಡಗ ಮತ್ತು ಮತ್ತೋಡು ಗ್ರಾಮದಲ್ಲಿ ಅನಗತ್ಯವಾದ ಸಮಸ್ಯೆ ಸೃಷ್ಟಿಸಿದ್ದಾರೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರನ್ನು ಹುಡುಕಿ ಪ್ರಕರಣ ದಾಖಲಿಸಲಾಗಿದೆ.
ಸಿದ್ದಾಪುರ ಗ್ರಾಮದಲ್ಲಿ ಶಾಸಕರ ವಿರುದ್ಧ ಅವರ ಬೆಂಬಲಿಗರೇ ಪ್ರತಿಕೃತಿ ದಹನ ಮಾಡಿ ಧಿಕ್ಕಾರ ಕೂಗಿದ್ದಾರೆ. ಆದರೆ, ಪ್ರತಿಭಟನೆ ಮಾಡಿದವರನ್ನು ಕೈ ಬಿಟ್ಟು ಉಳಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ದೂರಿದರು.
ಶ್ರೀರಾಂಪುರ ಠಾಣೆಯನ್ನು ಶಾಸಕರ ಬೆಂಬಲಿಗರು ಗುತ್ತಿಗೆ ಪಡೆದಿದ್ದಾರೆ. ಅಲ್ಲಿನ ಪಿಎಸ್‌ಐ ಠಾಣೆಗೆ ಹೋದವರಿಗೆ ಕಾಂಗ್ರೆಸ್ ಬೆಂಬಲಿಗರು ಹೋರಗೆ ಹೋಗಿ, ಶಾಸಕರ ಬೆಂಬಲಿಗರು ಮಾತ್ರ ಕುಳಿತುಕೊಳ್ಳಿ, ಕಾನೂನಿರುವುದು ಲಾಠಿಯ ತುದಿಯಲ್ಲಿ ಎಂದು ಪಕ್ಷಪಾತಿ ಧೋರಣೆ ಅನುಸರಿಸುತ್ತಾರೆ.
ಲಾಕ್‌ಡೌನ್ ವೇಳೆ ಪೋಲಿಸರು ಕಾನೂನು ಕ್ರಮ ತೆಗೆದುಕೊಳ್ಳುವುದರ ಬದಲಾಗಿ ಅಮಾಯಕರನ್ನು ಮನ ಬಂದಂತೆ ತಳಿಸಿದ್ದು, ಈ ಮೂಲಕ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿದರು.
ಕಾಂಗ್ರೆಸ್ ಪರವಾದ ಲಿಕ್ಕರ್ ಅಂಗಡಿಗಳ ಮಾಲೀಕರಿಗೆ ಉದ್ದೇಶ ಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಆಡಳಿತವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿರುವ ಶಾಸಕರು ತಮ್ಮ ಬೆಂಬಲಿಗರಿಗೆ ಮಾತ್ರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಬೇಕು ಎಂದು ಅಧಿಕಾರಿಗಳನ್ನು ಎದುರಿಸುತ್ತಿದ್ದಾರೆ ಎಂದು ದೂರಿದರು.