

ಹೊಸದುರ್ಗ: ಜಗದ್ಗುರು ಶಬ್ದಕ್ಕಿಂತ ಶರಣ ಸಂಸ್ಕೃತಿಯ ಪ್ರತಿಕವಾದ ಶರಣರು ಎನ್ನುವ ಪದ ವಿಶ್ವವ್ಯಾಪಿಯಾಗಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ತಾಲೂಕಿನ ಅಡವಿಸಂಗೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ 30ನೇ ವಿಜಯರಾಯ ಸಂಗಮೇಶ್ವರ ಜಯಂತಿ ಹಾಗೂ ಕುಂಚಿಟಿಗರ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದತ್ತ ಸ್ವಾಮೀಜಿಗಳ ನಡೆ ಇದ್ದರೆ ಮಾತ್ರ ಜನರು ಮಠಗಳತ್ತ ಬರುತ್ತಾರೆ ಎಂದರು.
ಸಮಾಜದಿಂದ ನಿರ್ಲಕ್ಷೃಕ್ಕೆ ಒಳಗಾದ ಸಣ್ಣ ಸಮುದಾಯಗಳನ್ನು ದೃವಿಕರಣಗೊಳಿಸುವುದೇ 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ನಡೆದ ಶರಣ ಚಳುವಳಿಯ ಮುಖ್ಯ ಆಶಯವಾಗಿತ್ತು. ದೂರ ದೃಷ್ಟಿಯಿದ್ದವರಿಂದ ಮಾತ್ರ ಇಂತಹ ಧೃವಿಕರಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕುಂಚಿಟಿಗರ ಸಂಘಟನೆಯ ಉದ್ದೇಶದಿಂದ ಕಳೆದ 30 ವರ್ಷಗಳ ಹಿಂದೆ ಅರಂಭಗೊಂಡ ವಿಜಯರಾಯ ಸಂಗಮೇಶ್ವರ ಜಯಂತಿ ರಥವನ್ನು ಮುರುಘಾ ಮಠ ಎಳೆದುತಂದು ಶಾಂತವೀರ ಶ್ರೀಗಳಿಗೆ ಹಸ್ತಾಂತರಿಸಿದೆ ಎಂದರು.
ಕುಂಚಿಟಿಗರನ್ನು ಸಮಗ್ರವಾಗಿ ಸಂಘಟಿಸುವ ಕೆಲಸವನ್ನು ಶಾಂತವೀರ ಶ್ರೀಗಳು ಯಶಸ್ವಿಯಾಗಿ ಮಾಡಿದ್ದಾರೆ. ಕೇವಲ ದಾಳಿಂಬೆ ಬೆಳೆಯಲು ಸೀಮಿತಗೊಳ್ಳದೆ ಸಮುದಾಯವನ್ನು ಬೆಳೆಸಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಜನಹಿತವನ್ನು ಸಂರಕ್ಷಿಸುವಲ್ಲಿ ಜಯಂತಿಯು ಸೂಕ್ತ ವೇದಿಕೆಯಾಗಿದೆ. ಶಾಂತವೀರ ಶ್ರೀಗಳು ಯಾವುದೇ ವಿರೋಧಕ್ಕೂ ಜಗ್ಗದೆ ಸಮುದಾಯವನ್ನು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ಕುಂಚಿಟಿಗ ಸಮುದಾಯ ಭವನ, ಸಂಗಮೇಶ್ವರ ಗದ್ದುಗೆ ಹಾಗೂ ಕುಂಚಿಟಿಗ ಮಠಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕುಂಚಿಟಿಗರ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಕೇವಲ ಆರು ದಿನಗಳ ಅವಧಿಯಲ್ಲಿ ಭಕ್ತರು ಅದ್ಧೂರಿ ಸಮಾವೇಶ ಆಯೋಜಿಸುವ ಮೂಲಕ ಕುಂಚಿಟಿಗರ ಸಂಘಟಿತ ಶಕ್ತಿಯನ್ನು ಅನಾವರಣಗೊಳಿಸಿದ್ದಾರೆ. ಸರ್ಕಾರ ಕುಂಚಿಟಿಗ ಮಠದ ಅಭಿವೃದ್ಧಿಗೆ 10 ಕೋಟಿ, ಹೊಳ್ಳಕೆರೆ ಹಾಗೂ ಐಮಂಗಲದಲ್ಲಿ ಸಮುದಾಯ ಭವನ ಕಟ್ಟಲು ತಲಾ 5 ಕೋಟಿ ರೂ. ಅನುದಾನ ಒದಗಿಸಬೇಕು ಎಂದರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಸಮಾವೇಶಗಳು ಸಂಘಟನೆಯ ಉದ್ದೇಶ ಹಾಗೂ ಸಮ ಸಮಾಜ ನಿರ್ಮಾಣದ ಕಲ್ಪನೆ ಹೊಂದಿರಬೇಕು. ಆದರೆ, ಸ್ಪರ್ಧೆಯಾಗಿ ಮಾರ್ಪಾಡು ಆಗಬಾರದು. ಜಯಂತಿ ಮಾಡಲು ನೀಡುವ ಹಣವನ್ನು ಕೆರೆ ಕಟ್ಟೆ ತುಂಬಿಸುವಂತಹ ಕಲ್ಯಾಣ ಕಾರ್ಯಗಳಿಗೆ ಬಳಸಲು ಸರ್ಕಾರ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ರೈತ ಮೊರ್ಚಾ ಉಪಾಧ್ಯಕ್ಷ ಎಸ್.ಲಿಂಗಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಪಿ.ರಮೇಶ್, ಟಿ.ಎಚ್.ಬಸವರಾಜಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಮುರಳಿಧರ ಹಾಲಪ್ಪ, ಡಿ.ಟಿ.ಶ್ರೀನಿವಾಸ್ ಮತ್ತಿತರರಿದ್ದರು.