ಶಾಸಕರ ತಪ್ಪು ನಡೆಗೆ ಬ್ಯಾರೇಜ್ ಬರಿದು

GOVINDAPPA_CONGRESS
Published on

ಹೊಸದುರ್ಗ: ಶಾಸಕರ ಅವೈಜ್ಞಾನಿಕ ನೀತಿಯಿಂದಾಗಿ ತಾಲೂಕಿನ ಮೂರು ಬ್ಯಾರೆಜ್‌ಗಳಲ್ಲಿ ನೀರು ಖಾಲಿ ಮಾಡಲಾಗಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಆರೋಪಿಸಿದರು.

ಪಟ್ಟಣದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಮೂರು ತಿಂಗಳ ಹಿಂದೆ ಮಳೆ ನೀರಿಗೆ ವೇದಾವತಿ ನದಿ ಹರಿವು ಬದಲಿಸಿದ ಹಿನ್ನೆಲೆಯಲ್ಲಿ ಕೆಲ್ಲೋಡು ಬ್ಯಾರೇಜ್ ಒಡೆದು ಹಾಳಾಗಿದೆ. ತಾಂತ್ರಿಕ ಸಲಹೆ ಪಡೆದು ವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದರೆ ನೀರು ನಿಲ್ಲಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಪಟ್ಟಣಕ್ಕೆ ಕುಡಿವ ನೀರಿನ ತೊಂದರೆ ಆಗಿರುವುದರಿಂದ ಕೊರಟಗೆರೆ ಹಾಗೂ ಬಲ್ಲಾಳಸಮುದ್ರ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿದ್ದ 10 ಅಡಿ ನೀರನ್ನು ರಾತ್ರೋರಾತ್ರಿ ಪೊಲೀಸ್ ಬಲ ಪ್ರಯೋಗಿಸಿ ವೇದಾವತಿ ನದಿ ಮೂಲಕ ಕೆಲ್ಲೋಡು ಬ್ಯಾರೇಜಿಗೆ ಹರಿಸಲಾಗಿದೆ. ಆದರೆ, 10 ಕೀಮಿ ದೂರದ ಖಾಲಿ ನದಿಯಲ್ಲಿ ನೀರು ಹರಿದು ಬಂದ ಪರಿಣಾಮ ಅಲ್ಪ ಸ್ವಲ್ಪ ನೀರು ಮಾತ್ರ ಕೆಲ್ಲೋಡಿಗೆ ಹರಿದುಬಂದಿದೆ. ಒಟ್ಟಾರೆ ಶಾಸಕರ ಬೇಜವಾಬ್ದಾರಿಯಿಂದ ಮೂರು ಬ್ಯಾರೇಜ್‌ಗಳು ಬರಿದಾಗಿವೆ ಎಂದು ದೂರಿದರು.

ತಾಂತ್ರಿಕ ಸಲಹೆ ಪಡೆಯದೆ ಪೊಲೀಸರ ಮೂಲಕ ನೀರು ಬಿಡಲಾಗಿದೆ. ನೀರು ಹರಿಸಲು ಪೊಲೀಸರಿಗಾಗಿ, ಪುರಸಭೆ ಅಧಿಕಾರಿಗಳಿಗೆ ಏನು ಅಧಿಕಾರವಿದೆ. ಈ ಕುರಿತು ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಚುನಾವಣೆಯಲ್ಲಿ ಮರಳು ಆಕ್ರಮದ ಆರೋಪ ಮಾಡಿದ ಶಾಸಕರು, ತಮ್ಮ ಹಿಂಬಾಲಕರಿಗೆ ಅಕ್ರಮ ಮರಳು ಗಣಿಗಾರಿಕೆ ನಡೆಸಲು ಅನುಕೂಲವಾಗುವಂತೆ ಬ್ಯಾರೇಜ್ ನೀರು ಖಾಲಿ ಮಾಡಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಟ್ಟಣಕ್ಕೆ ವಾಣಿವಿಲಾಸ ಸಾಗರದ ಹಿನ್ನೀರು ನೀರು ತರುವ ಯೋಜನೆ ರೂಪಿಸುತ್ತಿರುವುದು ಸ್ವಾಗತಾರ್ಹ. ಆದರೆ, ನೀರು ತರಲು ಯೋಜನೆ ರೂಪಿಸುವ ಮೊದಲು ನೀರು ಬಳಸಿಕೊಳ್ಳಲು ಡಿಆರ್‌ಡಿಒ ಸಮಿತಿ ಅನುಮತಿ ನೀಡಬೇಕು. ಈ ವಿಚಾರವನ್ನು ಶಾಸಕರು ಮೊದಲು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಸ್ಥಗಿತಗೊಂಡಿದೆ. ಅಜ್ಜಂಪುರ ಬಳಿ ರೈಲ್ವೆ ಸೇತುವೆ ಕೆಳಗೆ ಕಾಲುವೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಮುಂದಿನ ಮಳೆಗಾಲಕ್ಕೂ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಚಿತ್ರದುರ್ಗ, ತುಮಕೂರು ನಾಲೆಗಾಗಿ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಕೆಲಸ ನಡೆದಿಲ್ಲ. ರೈತರ ಜಮೀನಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಮಾಜಿ ಪುರಸಭೆ ಸದಸ್ಯ ಆಗ್ರೋ ಶಿವಣ್ಣ, ಮಾಜಿ ಜಿಪಂ ಉಪಾಧ್ಯಕ್ಷ ರಾಜಪ್ಪ, ಅಲ್ತಾಫ್, ಚಂದ್ರಶೇಖರ್, ಜಯಣ್ಣ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net