

ಹೊಸದುರ್ಗ: ಭೂಮಿಯನ್ನು ಹೊಂದಿದ್ದರೂ ಅಗತ್ಯ ದಾಖಲೆಗಳಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾದ ರೈತರಿಗೆ ಭೂ ದಾಖಲೆ ಒದಗಿಸಲಿಕ್ಕಾಗಿ ಪೌತಿಖಾತೆ ಆಂದೋಲನ ನಡೆಸಲಾಗುತ್ತಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.
ತಾಲೂಕಿನ ಚಿಕ್ಕಬ್ಯಾಲದ ಕೆರೆ ಗ್ರಾಮದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ಪೌತಿಖಾತೆ ಆಂದೋಲನ ಹಾಗೂ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ 59 ಸಾವಿರ ಖಾತೆದಾರರಲ್ಲಿ 6 ಸಾವಿರಕ್ಕೂ ಅಧಿಕ ಪೌತಿ ಖಾತೆಗಳಿವೆ. ಚಿಕ್ಕಬ್ಯಾಲದಕೆರೆ ಪಂಚಾಯಿತಿಯಲ್ಲಿ 1471 ಖಾತೆದಾರರಿದ್ದು, 168 ಪೌತಿ ಖಾತೆಗಳಿವೆ. ಮೃತಪಟ್ಟಿರುವ ಕುಟುಂಬದ ಹಿರಿಯರ ಹೆಸರಿನಲ್ಲಿ ಜಮೀನಿನ ದಾಖಲೆಗಳಿದ್ದರಿಂದ ನಿಜವಾದ ವಾರಸುದಾರರಿಗೆ ಸರ್ಕಾರಿ ಸೌಲಭ್ಯ ಪಡೆಯಲಾಗುತ್ತಿಲ್ಲ. ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮ್ಮ ಪಿತ್ರಾರ್ಜಿತ ಜಮೀನಿನ ಖಾತೆ ಬದಲಾಯಿಸುವಾಗ ಕೂಡ ಇಂತಹದ್ದೇ ಸಮಸ್ಯೆ ಎದುರಾಗಿತ್ತು ಎಂದರು.
ನನಗೆ ಸಮಸ್ಯೆಯಾದಂತೆ ಜನಸಾಮಾನ್ಯರೂ ಆದರೇನು ಸ್ಥಿತಿ ಎಂದು ಚಿಂತಿಸಿ, ಗ್ರಾಮದಲ್ಲಿರುವ ಹಿರಿಯರ ಹೇಳಿಕೆ ದಾಖಲಿಸಿ ನೈಜ ವಾರಸುದಾರರಿಗೆ ಹಕ್ಕು ಬದಲಾಯಿಸುವ ಸಲುವಾಗಿ ಪೌತಿಖಾತೆ ಆಂದೋಲನವನ್ನು ನಡೆಸಲಾಗುತ್ತಿದೆ. ಅಧಿಕಾರಿಗಳೇ ರೈತರ ಮನೆ ಬಾಗಿಲಿಗೆ ಬಂದು ಅರ್ಜಿ ಪಡೆದು ಖಾತೆ ಬದಲಾವಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಆಂದೋಲನ ಆರಂಭಿಸಿದಾಗ ಕೆಲವರು ಕೇವಲವಾಗಿ ಮಾತನಾಡಿದರು. ಆದರೆ, ಸದ್ಯ ಕಾರ್ಯಕ್ರಮದ ಮಹತ್ವ ತಿಳಿದು ಮೌನವಾಗಿದ್ದಾರೆ. ಖಾತೆ ಬದಲಾವಣೆಗಾಗಿ ಜನ ತಾಲೂಕು ಕಚೇರಿಗೆ ಅಲೆದಾಡುವುದು ತಪ್ಪಿದೆ. ಕಾರೇಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾತೆ ಬದಲಾವಣೆ ಮಾಡಿದ ಹೊಸ ಪಹಣಿಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಮುಖಂಡರಾದ ಹನುಮಂತಪ್ಪ, ವರದರಾಜಗೌಡ ಮತ್ತಿತರರಿದ್ದರು.