ಉಪ್ಪಾರ ಸಮುದಾಯ ಪ್ರಗತಿಗೆ ಬದ್ಧ

GOOLIHATTI SHEKAR
Published on

ಹೊಸದುರ್ಗ: ಉಪ್ಪಾರ ಸಮುದಾಯ ಆರ್ಥಿಕವಾಗಿ ಹಿಂದುಳಿದ್ದು, ಈ ವರ್ಗದ ಸಮಗ್ರ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಭರವಸೆ ನೀಡಿದರು.

ತಾಲೂಕಿನ ಬಿ.ವಿ.ನಗರದ ಭಗೀರಥ ಗುರುಪೀಠದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ 21ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪ್ಪಾರ ಸಮುದಾಯ ಹಾಗೂ ಪುರುಷೋತ್ತಮಾನಂದ ಪುರಿ ಶ್ರೀಗಳ ಆಶೀರ್ವಾದದಿಂದ ರಾಜಕೀಯ ಅರಂಭಿಸಿದ ನಾನು ಎರಡನೇ ಬಾರಿ ಶಾಸಕನಾಗಿದ್ದೇನೆ. ಈ ಸಮುದಾಯದ ಋಣ ತೀರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲು ಪ್ರಮುಖ ಪಾತ್ರವಹಿಸಿದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ಗೆ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

ಗೂಳಿಹಟ್ಟಿ ಡಿ.ಶೇಖರ್ ಮಧುರೆಯಿಂದ ಬಿ.ವಿ.ನಗರದ ವರೆಗೆ 2 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ರಸ್ತೆ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಕಳೆದ ಬಾರಿ 2 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ಭಗೀರಥ ಪೀಠದ ಅಭಿವೃದ್ಧಿಗಾಗಿ ಸರ್ಕಾರದಿಂದ 10 ಕೋಟಿ ರೂ. ವಿಶೇಷ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.

ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಶ್ರೀಗಳು ಭಗೀರಥ ಗುರುಪೀಠಕ್ಕೆ ಬಂದ ಮೇಲೆ ಉಪ್ಪಾರ ಸಮುದಾಯ ಅಭಿವೃದ್ಧಿಯತ್ತ ಮುಖ ಮಾಡಿದೆ. ಹಿಂದುಳಿದಿರುವರ ಅಭಿವೃದ್ಧಿಗೆ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ,ಶ್ರೀ ಕೃಷ್ಣಯಾದವಾನಂದ ಸ್ವಾಮೀಜಿ, ಶ್ರೀ ಇಮ್ಮಡಿಸಿದ್ದರಾಮ ಸ್ವಾಮೀಜಿ, ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಉಪ್ಪಾರ ಸಮಾಜದ ಅಧ್ಯಕ್ಷ ಕೊಂಡಾಪುರ ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net