

ಹೊಸದುರ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ಕುರಿತು ಚರ್ಚಿಸಿದ್ದೇನೆ ಎಂಬುದು ಗಾಳಿ ಸುದ್ದಿ. ನನ್ನ ವಿರುದ್ಧ ಸುಳ್ಳು ಸುದ್ದಿ ಹರಡುವವರು ಈ ಸಂಬಂಧ ಅವರೊಂದಿಗೆ ಸಮಾಲೋಚಿಸಿದ ಫೋಟೋ ನೀಡಿದರೆ ರಾಜಕೀಯದಿಂದಲೇ ನಿವೃತ್ತಿಯಾಗುವೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಭಾನುವಾರ ಪತ್ರಿಕೆಗೆ ತಿಳಿಸಿದರು.
ನಾನು ಕಾಂಗ್ರೆಸ್ ಸಂಪರ್ಕದಲ್ಲಿದ್ದೇನೆ ಎಂಬ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ. ನನ್ನನ್ನು ಗೌರವದಿಂದ ನಡೆಸಿಕೊಳ್ಳುವ ಜತೆಗೆ ಕ್ಷೇತ್ರದ ಅಭಿವೃದ್ಧಿ ಸಾಕಷ್ಟು ಅನುದಾನ ಹಾಗೂ ಉತ್ತಮ ಸ್ಥಾನಮಾನ ನೀಡಿದ ಪಕ್ಷವನ್ನು ನಾನ್ಯಾಕೆ ತ್ಯಜಿಸಲಿ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಪ್ರಶ್ನಿಸಿದ್ದಾರೆ.
ಬಿಜೆಪಿ ತೊರೆಯುವ ಕುರಿತು ಕನಸಿನಲ್ಲೂ ಯೋಚಿಸಿಲ್ಲ. ಚುನಾವಣೆ ಸಮಯದಲ್ಲಿ ನನ್ನ ತೇಜೋವಧೆಗೆ ಷಡ್ಯಂತ್ರ ನಡೆದಿದೆ. 2018ರಿಂದ ರಾಜ್ಯದಲ್ಲಿ ಪ್ರಮುಖ ರಾಜಕೀಯ ವಿದ್ಯಮಾನಗಳು ನಡೆದಾಗ ಅನಗತ್ಯವಾಗಿ ನನ್ನ ಹೆಸರು ತರಲಾಗುತ್ತಿದೆ ಎಂದರು.
ನನಗೆ ಬಿಜೆಪಿಯಲ್ಲಿ ಎಲ್ಲವೂ ಸಿಗುತ್ತಿದೆ. ಕ್ಷೇತ್ರದಲ್ಲೂ ಪಕ್ಷಕ್ಕೆ ಉತ್ತಮ ಬೆಂಬಲವಿದೆ. ಹೀಗಿದ್ದಾಗ ನಾನೇಕೆ ಅನ್ಯ ಪಕ್ಷದತ್ತ ನೋಡಲಿ? ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.
ಅನುದಾನ ಸದ್ಬಳಕೆ ಆಶಯದಿಂದ ಪತ್ರ: ಅಪ್ಪರ್ ಭದ್ರಾವನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರೂ. ನೀಡಿದೆ. ಈ ಅನುದಾನ ಅವ್ಯವಹಾರಕ್ಕೆ ಸಿಲುಕದೆ, ಪಾರದರ್ಶಕವಾಗಿ ಸದ್ಬಳಕೆಯಾಗಲಿ ಎಂಬ ಉದ್ದೇಶದಿಂದ ಜಲಸಂಪನ್ಮೂಲ ಇಲಾಖೆಯಲ್ಲಿ ಈ ಹಿಂದೆ ನಡೆದ ಅವ್ಯವಹಾರಗಳ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ಶಾಸಕರು ತಿಳಿಸಿದರು.
ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ತುಂಬಿಸುವ ಕಾಮಗಾರಿಗಳಲ್ಲಿ ಬಳಸಿದ ಪೈಪ್‌ನ ಗುಣಮಟ್ಟ ಕಳಪೆ ಆಗಿದೆ. ಈ ಹಿಂದೆ ವಿಧಾನಸಭೆಯಲ್ಲಿ ಪ್ರಸ್ತಾಪವಾದ ವಿಚಾರದ ಕುರಿತು ಸಾಮಾಜಿಕ ಕಳಕಳಿಯಿಂದ ಪತ್ರ ಬರೆದಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.