ಇಂದಿನಿಂದ ಅದ್ದೂರಿ ಹಾಲುರಾಮೇಶ್ವರ ಉತ್ಸವ

hsd halurameswara 18 p2
Published on

ಹೊಸದುರ್ಗ: ಮಹಾಶಿವರಾತ್ರಿ ಪ್ರಯುಕ್ತ ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ಹಾಲುರಾಮೇಶ್ವರದಲ್ಲಿ ಫೆ.19 ರಿಂದ 21 ರವರೆಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ನೇತೃತ್ವದಲ್ಲಿ ಹಾಲುರಾಮೇಶ್ವರ ಉತ್ಸವ ನಡೆಯಲಿದೆ. ಖ್ಯಾತ ಗಾಯಕರು, ಸಂಗೀತ ನಿರ್ದೇಶಕರು ಹಾಗೂ ಚಿತ್ರನಟರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ದೇಗುಲದ ಹಿಂಭಾಗ ಸುಮಾರು 10 ಎಕರೆ ಪ್ರದೇಶದಲ್ಲಿ ಕೈಲಾಸ ಪರ್ವತದ ಮಾದರಿಯಲ್ಲಿ ಸೆಟ್ ಹಾಕಲಾಗಿದೆ. 70 ಅಡಿ ಉದ್ದ, 40 ಅಡಿ ಅಗಲ, 28 ಅಡಿ ಎತ್ತರದಲ್ಲಿ ವೇದಿಕೆ ನಿರ್ಮಿಸಲಾಗಿದೆ. 15 ಸಾವಿರಕ್ಕೂ ಹೆಚ್ಚು ಕುರ್ಚಿ ಹಾಕಲಾಗಿದ್ದು. ಅಂತಾರಾಷ್ಟ್ರೀಯ ಮಟ್ಟದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲಾಗಿದೆ.

ಹತ್ತು ಎಕರೆಗೂ ಹೆಚ್ಚು ಪ್ರದೇಶದಲ್ಲಿ ನೆಲಕ್ಕೆ ಸಂಪೂರ್ಣವಾಗಿ ಮ್ಯಾಟ್ ಹಾಕಲಾಗಿದ್ದು, ಸ್ವಚ್ಛತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. 10 ಕ್ಕೂ ಹೆಚ್ಚು ಬೃಹತ್ ಎಲ್‌ಇಡಿ ವಾಲ್‌ಗಳನ್ನು ಅಳವಡಿಸಲಾಗಿದೆ.

ಹಾಲುರಾಮೇಶ್ವರದಲ್ಲಿ ನಡೆಯುವ ಕಾರ್ಯಕ್ರಮವನ್ನು ಹೊಸದುರ್ಗದಲ್ಲಿ ವೀಕ್ಷಿಸಲು ಅನುಕೂಲವಾಗುವಂತೆ ಪಟ್ಟಣದ ಹಳೇ ಬಸ್ ನಿಲ್ದಾಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿದೆ. ಮೂರು ದಿನ ಪುಣ್ಯಕ್ಷೇತ್ರದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ನಡೆಯಲಿವೆ. ರುದ್ರಾಭಿಷೇಕ, ಕುಂಕುಮಾರ್ಚನೆ, ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ.

ಸಂಗೀತ ಕಾರ್ಯಕ್ರಮ: ಫೆ.19ರ ಬುಧವಾರ ರಾಜೇಶ್ ಕೃಷ್ಣನ್, 20ರಂದು ಹೇಮಂತ್ ಮತ್ತು ಶಮಿತಾ ಮಲ್ನಾಡ್ ಹಾಗೂ ಫೆ.21 ರಂದು ಅರ್ಜುನ್ ಜನ್ಯ ಹಾಗೂ ನಟ ಡಾಲಿ ಧನಂಜಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಗಂಧರ್ವ ಮಂಜು ಅವರ ಗಂಧರ್ವ ಇವೆಂಟ್ಸ್ ಪ್ರಾಯೋಜಿಸಿರುವ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಆರ್.ಅಶೋಕ್, ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್ ಮತ್ತಿತರರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net