ಮಾನವೀಯ ಧರ್ಮ ಶ್ರೇಷ್ಠ

HSD KANUNU 13
Published on

ಹೊಸದುರ್ಗ: ದೇಶದ ಪ್ರತಿಯೊಬ್ಬ ಪ್ರಜೆ ದಿನನಿತ್ಯದ ಬದುಕಿಗೆ ಅಗತ್ಯವಿರುವಷ್ಟು ಕಾನೂನು ಸಾಕ್ಷರತೆ ಪಡೆಯುವ ಅಗತ್ಯವಿದೆ ಎಂದು ಜೆಎಂಎಫ್‌ಸಿ ಹಿರಿಯ ನ್ಯಾಯಾಧೀಶ ಬಿ.ಜಿ.ದಿನೇಶ್ ತಿಳಿಸಿದರು.

ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶುಕ್ರವಾರ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಸಾಕ್ಷರತಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ದೇಶದ ಸಂವಿಧಾನವನ್ನು ಗೌರವಿಸುವುದು ಪ್ರತಿ ನಾಗರಿಕನ ಕರ್ತವ್ಯ. ಕಾನೂನಿನ ಕುರಿತು ತಿಳಿದುಕೊಂಡರೆ ಅಪರಾಧಗಳ ಸಂಖ್ಯೆ ಹಾಗೂ ವಂಚನೆಗೆ ಕಡಿವಾಣ ಹಾಕಬಹುದು ಎಂದರು.

ವಿದ್ಯಾವಂತರಾಗಿದ್ದರೂ ಹಲವಾರು ಕಾನೂನಿನ ಕುರಿತು ಅರಿವಿಲ್ಲದೆ ಪರಿಪೂರ್ಣ ಸಾಕ್ಷರತೆ ಸಾಧಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಕಾನೂನು ಸಾಕ್ಷರತಾ ರಥಯಾತ್ರೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಪಂ ಇಒ ಜಾನಕಿರಾಮ್ ಮಾತನಾಡಿ, ಜನರಲ್ಲಿ ಕಾನೂನಿನ ಕುರಿತು ಅರಿವು ಮೂಡಿಸುವುದರಿಂದ ಅನಗತ್ಯವಾಗಿ ಕಾನೂನು ಕ್ರಮಕ್ಕೆ ಒಳಗಾಗುವುದನ್ನು ತಪ್ಪಿಸುವ ಜತೆಗೆ ಸಮಾಜದ ಆರೋಗ್ಯವನ್ನು ಕಾಪಾಡಬಹುದಾಗಿದೆ. ಇಂತಹ ಉತ್ತಮ ಕಾರ್ಯವನ್ನು ನ್ಯಾಯಾಂಗ ಕಾನೂನು ಸಾಕ್ಷರತಾ ರಥಯಾತ್ರೆಯ ಮೂಲಕ ಮಾಡುತ್ತಿದೆ. ಜನರು ರಥಯಾತ್ರೆಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕಾನೂನು ಅರಿವು ಪಡೆದುಕೊಳ್ಳಬೇಕು ಎಂದರು.

ಜಾತಿ, ಧರ್ಮ ಮತ್ತಿತರ ಅಂಶಗಳನ್ನು ಹೊರಗಿಟ್ಟು ಮಾನವೀಯ ಧರ್ಮವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು.

ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್, ವಕೀಲರ ಸಂಘದ ಅಧ್ಯಕ್ಷ ವಿ.ಗಂಗಾಧರ್, ಉಪಾಧ್ಯಕ್ಷ ಪಿ.ಈರಣ್ಣ, ಕಾರ್ಯದರ್ಶಿ ಎಚ್.ಬಿ.ರವಿಕುಮಾರ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net