

ಹೊಸದುರ್ಗ: ಹತ್ತು ಕೋಟಿ ರೂ. ವೆಚ್ಚದಲ್ಲಿ ಬೈಪಾಸ್ ನಿರ್ಮಾಣಕ್ಕೆ ಚಾಲನೆ ನೀಡುವ ಮೂಲಕ ತಾಲೂಕಿನ ಜನರು ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿದರು.
ಹತ್ತು ಕೋಟಿ ರೂ. ವೆಚ್ಚದ ಬೈಪಾಸ್ ನಿರ್ಮಾಣಕ್ಕೆ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಬಳಿ ಲೋಕೋಪಯೋಗಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತಾಲೂಕಿನ ಅಭಿವೃದ್ಧಿಗೆ ಬಿಎಸ್‌ವೈ ಸರ್ಕಾರ ಅಗತ್ಯ ಅನುದಾನ ನೀಡುತ್ತಿದೆ. ತಾಲೂಕಿನಲ್ಲಿ 100 ಕೋಟಿ ರೂ. ಹೆಚ್ಚಿನ ಅನುದಾನದಲ್ಲಿ ವಿವಿಧ ಕಾಮಗಾರಿ ನಡೆಯುತ್ತಿವೆ. ತಾಲೂಕಿನ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ಅಧಿಕಾರ ಅಧಿಕಾರ ದೊರಕಿದ್ದು, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದರು.
ಒಂದೂವರೆ ವರ್ಷ ಆಡಳಿತದಲ್ಲಿದ್ದ ಸಮ್ಮಿಶ್ರ ಸರ್ಕಾರ ತಾಲೂಕಿಗೆ ಅನುದಾನ ನೀಡದೇ ತಾರತಮ್ಯ ನೀತಿ ಅನುಸರಿಸಿತ್ತು. ನಂತರ ಅಧಿಕಾರಕ್ಕೆ ಬಂದ ಬಿಎಸ್‌ವೈ ಅಗತ್ಯ ನೆರವು ನೀಡಿದ್ದಾರೆ. ವಾಣಿವಿಲಾಸ ಸಾಗರ ಹಿನ್ನೀರಿಗೆ 54 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಪಟ್ಟಣದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಲು ಬೈಪಾಸ್ ನಿರ್ಮಾಣಕ್ಕೆ ಯೋಜಿಸಲಾಗಿದೆ. ಹಿರಿಯೂರು ರಸ್ತೆಯಿಂದ ಯಲಕ್ಕಪ್ಪನಹಟ್ಟಿಯವರೆಗೆ ಬೈಪಾಸ್ ನಿರ್ಮಾಣವಾಗಲಿದ್ದು, ಬೆಂಗಳೂರು ಹಾಗೂ ಚಿತ್ರದುರ್ಗ ರಸ್ತೆಯನ್ನು ಸಂಪರ್ಕಿಸಲಿದೆ ಎಂದರು.