

ಹೊಸದುರ್ಗ: ತಾಲೂಕಿನ ಸಿದ್ದಾಪುರದ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕು ಆಡಳಿತ ಹಾಗೂ ಸ್ಥಳೀಯರ ನಡುವೆ ಆರಂಭವಾಗಿರುವ ವಿವಾದ ಬುಧವಾರವೂ ಮುಂದುವರಿದಿತ್ತು.
ಮುಂಜಾನೆ ಇಂದಿರಾಗಾಂಧಿ ವಸತಿ ಶಾಲೆ ಬಳಿ ಜಮಾವಣೆಗೊಂಡ ಕೆಲ ಸ್ಥಳೀಯರು ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿರುವ ಜನರನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕರು, ಹೊರ ರಾಜ್ಯದಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಬೇಕೆಂದು ರಾಜ್ಯ ಸರ್ಕಾರ ಆದೇಶಿಸಿದೆ. ಇದರಂತೆ ಅವರನ್ನು ಸರ್ಕಾರಿ ಕಟ್ಟಡಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದರು.
ಈ ವಿಚಾರವನ್ನು ಕಾಂಗ್ರೆಸ್‌ನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನನ್ನ ವಿರುದ್ಧ ಸಲ್ಲದ ಆರೋಪ ಮಾಡಿ ಪ್ರತಿಭಟನೆ ಕೈಗೊಂಡಿರುವುದು ದುರದೃಷ್ಟಕರ. ಪ್ರತಿಭಟನೆ ವೇಳೆ ನನ್ನ ಕುಟುಂಬದ ಬಗ್ಗೆ ಅಗೌರವವಾಗಿ ಮಾತನಾಡಿದ್ದಕ್ಕೆ ನನಗೆ ನೋವಿದೆ. ಈ ರೀತಿಯ ರಾಜಕೀಯ ಸರಿಯಲ್ಲ ಎಂದು ಹೇಳಿದರು.
ನನ್ನ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಸ್ಥಳಕ್ಕೆ ಕರೆಸುವಂತೆ ಒತ್ತಾಯಿಸಿ ಸುಡು ಬಿಸಿಲಲ್ಲೇ ರಸ್ತೆಯಲ್ಲಿ ಕುಳಿತು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಪ್ರತಿಭಟನೆ ಆರಂಭಿಸಿದರು. ಮಧ್ಯೆ ಪ್ರವೇಶಿಸಿದ ಪೊಲೀಸರು, ಎರಡು ದಿನದೊಳಗೆ ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿ ಮನವೊಲಿಸಿದರು.
ಇಷ್ಟಕ್ಕೆ ಸುಮ್ಮನಾಗದ ಶಾಸಕರು, ಕ್ರಮ ಜರುಗಿಸದಿದ್ದರೆ ತಾಲೂಕು ಕಚೇರಿ ಎದುರು ಧರಣಿ ಕೂರುವುದಾಗಿ ಎಚ್ಚರಿಸಿ ಪ್ರತಿಭಟನೆ ಹಿಂಪಡೆದರು.