

ಹೊಸದುರ್ಗ: ಸಮಾಜದಲ್ಲಿ ಗಣ್ಯರೆನಿಸಿಕೊಂಡವರು ಅಕ್ರಮ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗದಲ್ಲಿ ನಿವೇಶನಗಳನ್ನು ರಚಿಸಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ, 9 ಮತ್ತು 10ನೇ ವಾರ್ಡ್ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದಲ್ಲಿ ಬಡವರು ಹಲವಾರು ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ಅನಧಿಕೃತವಾಗಿ ಮನೆ ಕಟ್ಟಿಕೊಂಡಿದ್ದಾರೆ. ಹಾಗಾಗಿ ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಅಕ್ರಮ ಎಂದು ಗೊತ್ತಿದ್ದರೂ ರಾಜಕೀಯ ವ್ಯವಸ್ಥೆಯಲ್ಲಿ ತಡೆಯಲಾಗುತ್ತಿಲ್ಲ ಎಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ, ಹಲವಾರು ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿದ್ದ 147 ಜನರನ್ನು ಗುರುತಿಸಿ 94 ಸಿಸಿ ಪ್ರಕಾರ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ಜತೆಗೆ ಮನೆ ನೋಂದಣಿ ಮಾಡಿಸಿ ಪುರಸಭೆಯಲ್ಲಿ ಖಾತೆ ಮಾಡಿಕೊಡಲಾಗುವುದು. ಶಾಸಕರು ಹೆಚ್ಚಿನ ಆಸಕ್ತಿ ವಹಿಸಿ ಬಡವರಿಗೆ ಸೂರು ಕಲ್ಪಿಸುವ ಕೆಲಸ ಮಾಡಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಆರ್.ಎಸ್.ಪ್ರಶಾಂತ್, ಓಬಳಮ್ಮ, ದಾಳಿಂಬೆ ಗಿರೀಶ್, ದೊಡ್ಡಯ್ಯ, ನಾಗರಾಜ್, ಸರೋಜಮ್ಮ, ಶಿವನೆಕಟ್ಟೆ ಶಶಿ ಮತ್ತಿತರಿದ್ದರು.