

ಹೊಸದುರ್ಗ: ದೇವಸ್ಥಾನದ ಗಂಟೆಯಿಂದ ಓಂಕಾರ ನಾದ, ಶಾಲೆ ಗಂಟೆಯಿಂದ ಅಕ್ಷರ ನಾದ ಮೂಡುತ್ತದೆ ಎಂದು ಕುಂಚಿಟಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಶುಕ್ರವಾರ ಮಲ್ಲಿಕಾರ್ಜುನ ಸ್ವಾಮಿ ದೇಗುಲ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ, ಪರಿಸರಕ್ಕೆ ಪೂರಕವಾಗಿ ಮಾಡುವ ಕೆಲಸಗಳು ದೇವರ ಪೂಜೆಗಿಂತಲೂ ಮಿಗಿಲು ಎಂದರು.
ದೇಶದ ಜನಸಂಖ್ಯೆಗೆ ಅನುಗುಣವಾಗಿ ಶಾಲೆಗಳ ಸ್ಥಾಪನೆ ಅಗತ್ಯ ಇದೆ. ಈ ಕಾರಣಕ್ಕೆ ಶಿಕ್ಷಣಕ್ಕೆ ಮೊದಲ ಪ್ರಾಶಸ್ತ್ಯ ನೀಡಬೇಕು. ನಂತರ ಪರಿಸರ, ಧಾರ್ಮಿಕ ಆಚರಣೆ ಕೈಗೊಳ್ಳಬೇಕು ಎಂದು ಹೇಳಿದರು.
ಸಸಿ ನೆಡುವ, ಕೆರೆ ಊಳೆತ್ತುವ, ಗೋಮಾಳ, ಕಾವಲು ಕಾಯುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ನೀರಿಗಾಗಿ ಯುದ್ಧ ಮಾಡುವ ಸಂದರ್ಭ ಬಂದರೂ ಆಶ್ಚರ್ಯವಿಲ್ಲ. ಗ್ರಾಮಗಳು ಸುಧಾರಣೆಯಾದರೆ ಮಾತ್ರ ದೇಶ ಸಮೃದ್ಧಿ ಸಾಧ್ಯ ಎಂದು ತಿಳಿಸಿದರು.
ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ದೇವರ ನಡುವೆ ಹೊಂದಾಣಿಕೆ ಇದೆ. ಆದರೆ, ಮನುಷ್ಯ ನಡುವೆ ಸಾಮರಸ್ಯ ಇಲ್ಲದಂತಾಗಿದೆ. ಇತ್ತೀಚೆಗೆ ಸಣ್ಣಪುಟ್ಟ ವಿಚಾರಗಳಿಗೆ ಸಹೋದರ ಸಂಬಂಧಗಳೇ ಹಾಳಾಗುತ್ತಿರುವುದು ಆತಂಕದ ಸಂಗತಿ ಎಂದರು.
ದೇಶದಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮಕ್ಕಳು ತಂದೆ ತಾಯಿ ಗುರು ಹಿರಿಯರನ್ನು ಗೌರವದಿಂದ ಕಾಣುವ ಸಂಪ್ರದಾಯ ಬೆಳೆಸಬೇಕು ಎಂದರು.
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. 6 ತಿಂಗಳಲ್ಲಿ ಈ ಗ್ರಾಮಕ್ಕೆ ಬೇಕಾದ ರಸ್ತೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡುತ್ತೇನೆ. ಇಲ್ಲಿನ ಜನ ಭದ್ರಾ ನೀರು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆದರೆ, ಗ್ರಾಮ ಕಾಲುವೆ ಬಲಭಾಗದಲ್ಲಿ ಬರುವ ಕಾರಣ ಕೊಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಹಂತದಲ್ಲಿ ಈ ಕುರಿತು ಚರ್ಚಿಸುತ್ತೇನೆ ಎಂದರು.
ನಂದಿಪುರದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹೊಸದುರ್ಗ ಮಾಜಿ ಶಾಸಕ ಟಿ.ಎಚ್.ಬಸವರಾಜಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಪತ್ರಕರ್ತ ದೀಪಕ್ ತಿಮ್ಮಯ್ಯ, ಎಪಿಎಂಸಿ ಅಧ್ಯಕ್ಷ ಹೆಬ್ಬಳ್ಳಿ ಮಲ್ಲಿಕಾರ್ಜುನ್ ಇತರರು ಉಪಸ್ಥಿತರಿದ್ದರು.