

ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯ ಕಬ್ಬಳ ಗ್ರಾಮದಲ್ಲಿ ಭಾನುವಾರ ಶ್ರೀ ಪಾಂಡುರಂಗಸ್ವಾಮಿ-ರುಕ್ಮಿಣಿ ದೇವಿಯ 18ನೇ ವರ್ಷದ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸಂಜೆ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಶೋಡಶೋಪಚಾರ ಪೂಜೆ, ಬೆಣ್ಣೆ ಅಲಂಕಾರ ಸೇವೆ ಜರುಗಿತು. ರಾತ್ರಿ ದೇವರುಗಳ ರಾಜಬೀದಿ ಉತ್ಸವ ನಡೆಯಿತು.
ಭಾನುವಾರ ಮುಂಜಾನೆ ದೇವಾಲಯದಲ್ಲಿ ಕಾಕಡಾರತಿ, ಕಾಲ ಕೀರ್ತನೆ, ಪೂರ್ಣಕುಂಭ ಕಳಶದೊಂದಿಗೆ ಉತ್ಸವಮೂರ್ತಿಗಳ ಮೆರವಣಿಗೆ ಬಳಿಕ ದಿಂಡಿ ಉತ್ಸವದ ಪ್ರಮುಖ ಆಕರ್ಷಣೆಯಾದ ರಾಜಬೀದಿ ಉತ್ಸವ ವಿಜೃಂಭಣೆಯಿಂದ ಜರುಗಿತು.
ಆನೆಯ ಮೇಲೆ ಆಸೀನರಾದ ಶ್ರೀ ಪಾಂಡುರಂಗಸ್ವಾಮಿ, ರುಕ್ಮಿಣಿ ದೇವಿಯ ಮೂರ್ತಿಗಳ ಅಂಬಾರಿ ಉತ್ಸವ ಆರಂಭಗೊಳ್ಳುತ್ತಿದಂತೆ ಭಕ್ತರು ಪಾಂಡುರಂಗ ಸ್ಮರಣೆ ಮಾಡುತ್ತಾ ಸಂಭ್ರಮಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.