ಮಠದಿಂದ ಸಿಎಂ ನಿಧಿಗೆ ನೆರವು

KUNCHITIGA SWAMIJI (2)
Published on

ಹೊಸದುರ್ಗ: ಕರೊನಾ ವಿರುದ್ಧ ಹೋರಾಡಲು ಅಗತ್ಯ ನೆರವು ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಲು ಭಕ್ತರು ಹೆಚ್ಚಿನ ಸಹಕಾರ ನೀಡಬೇಕು ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮನವಿ ಮಾಡಿದ್ದಾರೆ.

ಪಟ್ಟಣದ ಕುಂಚಿಟಿಗ ಶ್ರೀಮಠದಲ್ಲಿ ಮಾತನಾಡಿ, ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಸರ್ಕಾರ ಘೋಷಿಸಿರುವ ಲಾಕ್‌ಡೌನ್ ಪಾಲಿಸುವ ಉದ್ದೇಶದಿಂದ ಶ್ರೀಮಠದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.

ಮಠದಿಂದ ಹಲವು ಬಡವರಿಗೆ ಆರ್ಥಿಕ ಸಹಾಯ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಫೋನ್ ಪೇ, ಮೊಬೈಲ್ ಬ್ಯಾಂಕಿಂಗ್, ನಗದು ಹಣ, ದಿನಬಳಕೆಯ ಸಾಮಗ್ರಿ ನೀಡಿ ಸಹಾಯ ಮಾಡುತ್ತಿದ್ದೇವೆ. ಪ್ರಚಾರಕ್ಕಾಗಿ ದಾನ ಮಾಡುವುದು ಇತ್ತೀಚೆಗೆ ಗೀಳಾಗಿರುವುದು ಬೇಸರ ತರಿಸಿದೆ ಎಂದು ಹೇಳಿದರು.

ಬಡವರಿಗೆ ಸಹಾಯ ಮಾಡುವ ಮನಸ್ಸಿರುವ ಜನರು ಉದಾರವಾಗಿ ದಾನ ನೀಡಿ. ಆದರೆ, ಸ್ವಪ್ರತಿಷ್ಠೆಗಾಗಿ, ಪ್ರಚಾರಕ್ಕಾಗಿ ಬಡವರನ್ನು, ಪರಿಸ್ಥಿತಿಯ ಅವಕೃಪೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸ್ವಾಭಿಮಾನಿ ಜನರನ್ನು ಅವಮಾನಿಸಬೇಡಿ ಎಂದು ಮನವಿ ಮಾಡಿದರು.

ರೋಗದ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಕ್ಕೆ ಆರ್ಥಿಕ ಅಗತ್ಯವಿದೆ. ಆದ್ದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶ್ರೀಮಠದಿಂದ ಹೆಚ್ಚು ದೇಣಿಗೆ ನೀಡಲು ಪ್ರಯತ್ನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net