

ಹೊಸದುರ್ಗ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಪಟ್ಟಣದ ಮೂರು ಸಾವಿರ ಕುಟುಂಬಗಳ ನೆರವಿಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮುಂದಾಗಿದ್ದು, ಸ್ವಂತ ಹಣದಿಂದ ಪರಿಹಾರ ನೀಡುತ್ತಿದ್ದಾರೆ.
ಕೂಲಿ ಕೆಲಸ ಆಶ್ರಯಿಸಿ ಬದುಕುತ್ತಿರುವ ಬಹುತೇಕ ಕುಟುಂಬಗಳು ಲಾಕ್‌ಡೌನ್ ಘೋಷಿಸಿದ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಅಂತಹ ಕುಟುಂಬಗಳಿಗೆ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸರ್ಕಾರದ ಸೌಲಭ್ಯ ಮತ್ತು ಸಹಾಯಕ್ಕೆ ಕಾಯದೆ ಸ್ವಂತ ಹಣದಲ್ಲಿಯೇ ಅಗತ್ಯ ಆಹಾರ ಸಾಮಗ್ರಿ ಪೂರೈಸುವ ಕೆಲಸ ಮಾಡಿದ್ದಾರೆ.
15 ದಿನಕ್ಕೆ ಅಗತ್ಯವಾದ ಸುಮಾರು 1500 ರೂಪಾಯಿ ಮೌಲ್ಯದ ಅಕ್ಕಿ, ಬೆಳೆ, ಎಣ್ಣೆ, ಸಾಂಬರ್ ಪದಾರ್ಥಗಳು, ಸೋಪು, ಪೇಸ್ಟ್ ಸೇರಿದಂತೆ ನಿತ್ಯದ ಬಳಕೆ ಅಗತ್ಯವಾದ ವಸ್ತುಗಳನ್ನು ಒಳಗೊಂಡ 3 ಸಾವಿರ ಪ್ಯಾಕೆಟ್ ತಯಾರಿಸಿ ಪಟ್ಟಣದ 23 ವಾರ್ಡ್‌ಗಳ ಮೂರು ಸಾವಿರ ಕುಟುಂಬಗಳಿಗೆ ಹಂಚಿದ್ದಾರೆ.
45 ಲಕ್ಷ ರೂ. ಸ್ವಂತ ಹಣ ಖರ್ಚು ಮಾಡಿ ಆಹಾರ ಪದಾರ್ಥಗಳನ್ನು ನೀಡುತ್ತಿದ್ದರೂ ತಾವೇ ನೇರವಾಗಿ ಹಂಚಿಕೆ ಮಾಡದೆ ಪುರಸಭಾ ಸದಸ್ಯರ ಮೂಲಕ ಹಂಚಿಕೆ ಮಾಡುತ್ತಿದ್ದಾರೆ. ಎಲ್ಲ ಪಕ್ಷಗಳ ಪುರಸಭೆ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಾರತಮ್ಯ ಮಾಡದೆ ಅವರ ಮೂಲಕವೇ ವಿತರಣೆ ಮಾಡುವ ಮೂಲಕ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಿದ್ದಾರೆ.
3 ಸಾವಿರ ಕುಟುಂಬಗಳಿಗೆ ವಿತರಣೆ ಮಾಡಿದ ಪ್ರತಿ ಪ್ಯಾಕೆಟ್‌ನಲ್ಲಿ 10 ಕೆಜಿ ಅಕ್ಕಿ, 2 ಲೀಟರ್ ಅಡುಗೆ ಎಣ್ಣೆ, 1 ಕೆಜಿ ರವೆ, 1 ಕೆಜಿ ಅವಲಕ್ಕಿ, 1ಕೆಜಿ ತೊಗರಿಬೇಳೆ, 1 ಕೆಜಿ ಕಡಲೆಬೇಳೆ, ಗೋಧಿಹಿಟ್ಟು, ಉಪ್ಪು, ಸೋಪು, ಬಟ್ಟೆ ಸೋಪು, ಟೂತ್ ಪೇಸ್ಟ್ ಮತ್ತಿತರ ವಸ್ತುಗಳನ್ನು ಒಳಗೊಂಡಿದೆ.
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿಕೆ: ಸರ್ಕಾರ ನೀಡುವ ಸಹಾಯಕ್ಕೆ ಕಾದು ಕುಳಿತಿದ್ದರೆ ಜನರು ಹಸಿವಿಗೆ ಸಿಲುಕುತ್ತಿದ್ದರು. ಸಂಕಷ್ಟದಲ್ಲಿದ್ದ ಜನರಿಗೆ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ನನಗೆ ಸ್ವಂತ ಕುಟುಂಬವಿಲ್ಲ ಕ್ಷೇತ್ರದ ಜನರೇ ನನ್ನ ಸಂಬಂಧಿಗಳು. ಭಗವಂತನ ಕೃಪೆಯಿಂದ ಜನರಿಗೆ ಸಹಾಯ ಮಾಡಲು ಸಾಧ್ಯವಾಗಿದೆ. ಇದರಲ್ಲಿ ಪ್ರಚಾರ ಪಡೆಯುವ ಉದ್ದೇಶವಿಲ್ಲ. ಕೇವಲ ಮಾನವೀಯತೆಗೆ ಮಾತ್ರ ಅವಕಾಶ.