

ಹೊಸದುರ್ಗ: ಹೊಸದುರ್ಗ ತಾಲೂಕು ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿದ್ದರೂ ಇಲ್ಲಿನ ಜನರ ವ್ಯವಹಾರಿಕ ಸಂಬಂಧ ಹೆಚ್ಚಾಗಿ ದಾವಣಗೆರೆ ಜತೆಗಿದೆ.
ಈ ಕಾರಣಕ್ಕೆ ದಾವಣಗೆರೆ ನಗರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುಮುಖದಲ್ಲಿ ಸಾಗುತ್ತಿದ್ದಂತೆ ಹೊಸದುರ್ಗದ ಜನರನ್ನು ಆತಂಕಕ್ಕೆ ದೂಡಿತ್ತು.
ಲಾಕ್‌ಡೌನ್ ಸಡಿಲಿಕೆಯಿಂದ ತಾಲೂಕಿನಲ್ಲಿ ಉಂಟಾಗಿದ್ದ ಜನಸಂದಣಿ ನಿಯಂತ್ರಿಸಲು ಸಾರ್ವಜನಿಕರೇ ಸ್ವ ಪ್ರೇರಣೆಯಿಂದ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಮಂಗಳವಾರ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬುಧುವಾರ ಜನರ ಓಡಾಟ ತೀರಾ ಕಡಿಮೆಯಾಗಿತ್ತು.
ಹೊಸದುರ್ಗದಿಂದ ದಾವಣಗೆರೆಗೆ ರೈಲು, ರಸ್ತೆ ಸಂಪರ್ಕ ಇರುವುದೇ ಬೆಣ್ಣೆನಗರಿಯೊಂದಿಗೆ ಜನರ ಬಾಂಧವ್ಯ ಹೆಚ್ಚಲು ಕಾರಣ.
ದಾವಣಗೆರೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 40ರ ಗಡಿ ದಾಟುವ ವೇಳೆಗೆ ಸರಿಯಾಗಿ ಸರ್ಕಾರ ಹಸಿರು ವಲಯದಲ್ಲಿರುವ ತಾಲೂಕಿನಲ್ಲಿ ಲಾಕ್‌ಡೌನ್ ಸಡಿಲಿಕೆ ಜತೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿತ್ತು. ಇದರಿಂದ ದಾವಣಗೆರೆಯಲ್ಲಿ ನೆಲೆಸಿರುವ ಸರ್ಕಾರಿ ನೌಕರರು, ಸಂಬಂಧಿಗಳು ತಾಲೂಕಿಗೆ ಬರಲು ಅನುವು ಮಾಡಿಕೊಟ್ಟಂತೆ ಆಯಿತು.
ತಾಲೂಕಿನಲ್ಲಿ ನಡೆಯುವ ದಿನಸಿ, ಅಕ್ಕಿ, ಬೆಳೆ, ತರಕಾರಿ, ಹಣ್ಣು ಸೇರಿ ಬಹುತೇಕ ವ್ಯಾಪಾರ ವಹಿವಾಟಿನ ಶೇ.95ರಷ್ಟು ಸರಕು ಬರುವುದು ದಾವಣಗೆರೆಯಿಂದ. ಮೆಡಿಕಲ್ ಸ್ಟೋರ್‌ಗಳಿಗೂ ಕೂಡ ದಾವಣಗೆರೆಯಿಂದಲೇ ಔಷಧ ಸರಬರಾಜು ಆಗುವುದು. ಇದರಿಂದ ತಾಲೂಕಿಗೆ ದಾವಣಗೆರೆಯಿಂದ ಬಂದು ಹೋಗುವವರ ಸಂಖ್ಯೆ ಹೆಚ್ಚಾಗಿದೆ.
ಚಿತ್ರದುರ್ಗ ಜಿಲ್ಲೆಯ ಉಳಿದ ತಾಲೂಕುಗಳ ಸ್ಥಿತಿಗಿಂತ ಹೊಸದುರ್ಗದ ಸ್ಥಿತಿ ವಿಭಿನ್ನ. ದಾವಣಗೆರೆಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿರುವುದು ತಾಲೂಕಿನ ಜನರಲ್ಲಿ ಭಯ ಹೆಚ್ಚಾಗಲು ಕಾರಣವಾಗಿದೆ.
ಸರ್ಕಾರದ ಆದೇಶಕ್ಕೆ ಕಾಯುತ್ತ ಕುಳಿತರೆ ನಮ್ಮ ರಕ್ಷಣೆ ಸಾಧ್ಯವಿಲ್ಲ ಎಂದು ಜನರೇ ಸಂಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ, ಸಾರ್ವಜನಿಕರು ಹಾಗೂ ವರ್ತಕರ ಸಂಘದಿಂದ ಬುಧವಾರ ವಾಯೋಜಿಸಿದ್ದ ಸಭೆಯಲ್ಲಿ ಕರೊನಾ ವೈರಸ್‌ನಿಂದ ರಕ್ಷಣೆ ಪಡೆಯಲು ಅಂಗಡಿಗಳನ್ನು ಬೆಳಗ್ಗೆ 7ರಿಂದ 12ರ ವರೆಗೆ ಮಾತ್ರ ತೆರೆಯಲು ನಿರ್ಧರಿಸಲಾಯಿತು. ಚಿನ್ನಬೆಳ್ಳಿ ವರ್ತಕರ ಸಂಘದವರು ಲಾಕ್‌ಡೌನ್ ಮುಗಿಯುವವರೆಗೂ ಸಂಪೂರ್ಣ ಬಾಗಿಲು ಮುಚ್ಚಲು ಸಿದ್ಧ ಎಂದು ಘೋಷಿಸುವ ಮೂಲಕ ಸಾರ್ವಜನಿಕರ ನಿರ್ಧಾರಕ್ಕೆ ಬೆಂಬಲ ನೀಡಿದರು.
ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಮನವಿ ಮೇರೆಗೆ ತೆಗೆದುಕೊಂಡ ಸಮಯೋಚಿತ ನಿರ್ಧಾರದಿಂದ ಬುಧವಾರ ವಾಹನ ದಟ್ಟಣೆ ಹಾಗೂ ಜನರ ಓಡಾಟ ಕಡಿಮೆಯಾಗಿ. ತಾಲೂಕಿನ ಜನರಲ್ಲಿ ನೆಮ್ಮದಿ ಮೂಡಿಸಿತು.