ಹೊಸದುರ್ಗ ಜನತೆಗೆ ಕರೊನಾ ಭೀತಿ

HSD CARONA 09
Published on

ಹೊಸದುರ್ಗ: ಕರೊನಾ ಭೀತಿಯಿಂದ ತಾತ್ಕಾಲಿಕ ರಿಲೀಫ್ ಪಡೆದಿದ್ದ ಹೊಸದುರ್ಗ ತಾಲೂಕಿನ ಜನರಿಗೆ ಪಕ್ಕದ ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾದ್ದರಿಂದ ಭಯ ಶುರುವಾಗಿದೆ.

ವ್ಯವಹಾರಿಕವಾಗಿ ಹೊಸದುರ್ಗಕ್ಕೆ ದಾವಣಗೆರೆ ಜತೆ ನಂಟಿದೆ. ಈ ಅಂಶವೇ ಇದೀಗ ಹೆದರಿಕೆಗೆ ಕಾರಣವಾಗಿದೆ.

ಭಾನುವಾರ ಲಾಕ್‌ಡೌನ್ ನಿಯಮ ಸಡಿಲಿಸಿದ್ದರಿಂದ ಹಸಿರು ವಲಯದ ಹೊಸದುರ್ಗದಲ್ಲಿ ಬೆಳಗ್ಗೆ 9 ರಿಂದ 5ರ ವರೆಗೆ ಅಂಗಡಿಗಳ ಬಾಗಿಲು ತೆಗೆಯಲು ತಾಲೂಕು ಆಡಳಿತ ಅವಕಾಶ ಕಲ್ಪಿಸಿತ್ತು.

ದಿನಸಿ, ಕಿರಾಣಿ ವ್ಯಾಪಾರಕ್ಕೆ ದಾವಣಗೆರೆ ಆಶ್ರಯಿಸಿರುವ ವರ್ತಕರು ಸಗಟು ಖರೀದಿಗೆ ದಾವಣಗೆರೆಯತ್ತ ಮುಖ ಮಾಡುತ್ತಿದ್ದು ಗರಿಷ್ಠ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಹಿಂದೆ ಹೊಸದುರ್ಗಕ್ಕೆ ರೈಲಿನಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಅಧಿಕಾರಿಗಳು, ಬ್ಯಾಂಕ್ ನೌಕರರು, ಖಾಸಗಿ ಸಂಸ್ಥೆಗಳ ಸಿಬ್ಬಂದಿ ಇದೀಗ ಸ್ವಂತ ಕಾರುಗಳಲ್ಲಿ ದಿನವೂ ಸಂಚರಿಸುತ್ತಿದ್ದಾರೆ. ಇವರಿಂದ ನಗರವಾಸಿಗಳಿಗೆ ಸೋಂಕು ತಗುಲುವ ಎಲ್ಲ ಸಾಧ್ಯತೆ ಇದೆ.

ಸರ್ಕಾರಿ ನೌಕರರಿಗೆ ಕೆಸಿಎಸ್‌ಆರ್ ನಿಯಮದ ಪ್ರಕಾರ ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕೆಂಬ ನಿಯಮಗಳಿವೆ. ಆದರೂ ಅಧಿಕಾರಿಗಳು ದಾವಣಗೆರೆ ಮತ್ತಿತರ ಕಡೆಗಳಿಂದ ತಮ್ಮ ಇಲಾಖೆಯ ಗುರುತಿನ ಚೀಟಿ ಹಾಗೂ ಪಾಸ್ ಬಳಸಿ ಓಡಾಟ ನಡೆಸುತ್ತಿದ್ದಾರೆ.

ತಾಲೂಕು ಆಡಳಿತ ಕೂಡಲೇ ಅಂತವರನ್ನು ಗುರುತಿಸಿ ಅವರನ್ನು ಕೇಂದ್ರ ಸ್ಥಾನದಲ್ಲಿಯೇ ಉಳಿಯುವಂತೆ ಅಥವಾ ರಜೆಯ ಮೇಲೆ ತೆರಳುವಂತೆ ಆದೇಶ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚಾಗುವ ಜತೆಗೆ ಲಾಕ್‌ಡೌನ್ ಸಹ ಸಡಿಲಿಸಿದ್ದರಿಂದ ಜನ ಓಡಾಟ ಸಾಮಾನ್ಯವಾಗಿದೆ. ಅಲ್ಲದೆ ಮದ್ಯದ ಅಂಗಡಿಗಳು ಬಾಗಿಲು ತೆರೆದಿದ್ದರಿಂದ ಹಸಿರು ವಲಯದಲ್ಲಿರುವ ಹೊಸದುರ್ಗ ಕೆಂಪು ವಲಯಕ್ಕೆ ಜಾರುವ ಮುನ್ಸೂಚನೆ ಕಾಣುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net