ಗೆಲ್ಲದಿದ್ದರೆ ರಾಜಕೀಯ ಸನ್ಯಾಸ; ಶಾಸಕ ಗೂಳಿಹಟ್ಟಿ ಶೇಖರ್

gulihatti shekar hosadurga mla
Published on

ಹೊಸದುರ್ಗ: ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಅವರನ್ನು 50 ಸಾವಿರ ಮತಗಳ ಅಂತರದಿಂದ ಸೋಲಿಸದಿದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಸವಾಲು ಹಾಕಿದ್ದಾರೆ.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಅಭಿವೃದ್ಧಿ ಸಹಿಸದೆ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಹತಾಶರಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಕಳೆದ ಬಾರಿ 92 ಸಾವಿರ ಮತ ಪಡೆದಿದ್ದೆ. ಬರುವ ಚುನಾವಣೆಯಲ್ಲಿ 1.20 ಲಕ್ಷ ಮತ ಪಡೆಯುವ ಮೂಲಕ ಗೆಲುವು ಸಾಧಿಸುತ್ತೇನೆ ಎಂದು ತಿಳಿಸಿದರು.

ಹಾಲು ರಾಮೇಶ್ವರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹಾಲು ರಾಮೇಶ್ವರದ ವಿಷಯದಲ್ಲಿ ರಾಜಕೀಯ ಮಾಡಿದರೆ ತಕ್ಕ ಶಾಸ್ತಿ ಅನುಭವಿಸುತ್ತಾರೆ. ಅದರ ಅಭಿವೃದ್ಧಿಗಾಗಿ ಮಾಜಿ ಶಾಸಕರು ಒಂದು ಪೈಸೆ ಅನುದಾನ ನೀಡಿಲ್ಲ. 4 ತಿಂಗಳಲ್ಲಿ ಮೂರು ದೇವಾಲಯ, ಕಲ್ಯಾಣಿಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.

ಸಂಘಟನೆಗೆ ಮತ್ತೊಮ್ಮೆ ಅಭಿಯಾನ

ಹೊಸದುರ್ಗ ತಾಲೂಕಿನಲ್ಲಿ ವಿಧಾನಸಭೆಗೆ ಸ್ಪರ್ಧಿಸಲು ಹೊಸ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನಾನೂ ರಾಜಕೀಯ ಸಂಘಟನೆ ಬಲಪಡಿಸುವ ಉದ್ದೇಶದಿಂದ ಜು.29ರಿಂದ ಮತ್ತೊಮ್ಮೆ ಗೂಳಿಹಟ್ಟಿ ಶೇಖರ್ ಅಭಿಯಾನ ಅರಂಭಿಸಲಾಗುತ್ತಿದೆ. ಬೆಂಬಲಿಗರು, ಹಿತೈಷಿಗಳ ಒತ್ತಡಕ್ಕೆ ಮಣಿದು ಸಂಘಟನೆಗೆ ಮುಂದಾಗಿದ್ದೇನೆ. ಹಾರನಕಣಿವೆ ರಂಗನಾಥ ಸ್ವಾಮಿ ಕ್ಷೇತ್ರದಿಂದ ಸಂಘಟನಾ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು ಶಾಸಕ ಗೂಳಿಹಟ್ಟಿ ಡಿ.ಶೇಖರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net