ಭದ್ರೆ ಕಾಮಗಾರಿಗಿದ್ದ ಅಡ್ಡಿಗೆ ಮುಕ್ತಿ

HSD BADRA 10 (4)
Published on

ಯೋಗೀಶ್ ಎಂ.ಮೇಟಿಕುರ್ಕೆ ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಸವಾಲಾಗಿದ್ದ ಅಜ್ಜಂಪುರ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಆರಂಭಕ್ಕೆ ರೈಲ್ವೆ ಸಚಿವರು ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಈ ಮೂಲಕ ಜಿಲ್ಲೆಯ ಜನರ ನಾಲ್ಕು ದಶಕಗಳ ಹೋರಾಟದ ಫಲವಾಗಿ ಜಾರಿಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆಗಿದ್ದ ಅಡ್ಡಿಗೆ ಮುಕ್ತಿ ದೊರೆತಿದೆ.

ಕಳೆದ ವರ್ಷ ಭದ್ರಾ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಲು ಸಿದ್ಧತೆ ನಡೆಸಿದಾಗ ಅಜ್ಜಂಪುರ ರೈಲ್ವೆ ಅಂಡರ್ ಪಾಸ್‌ನಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ರೈಲ್ವೆ ಸೇತುವೆ ಕುಸಿಯುತ್ತಿರುವ ಕಾರಣ ಕಾಮಗಾರಿ ಸ್ಥಗಿತಗೊಳಿಸಿ ಸೇತುವೆ ಕೆಳಗೆ ಪೈಪ್ ಅಳವಡಿಸುವ ತಾತ್ಕಾಲಿಕವಾಗಿ ನೀರು ಹರಿಸಲಾಗಿತ್ತು.

ಕಾಮಗಾರಿ ಪುನರಾರಂಭಿಸುವ ಉದ್ದೇಶದಿಂದ ಸಂಸದ ಎ.ನಾರಾಯಣ ಸ್ವಾಮಿ, ಶನಿವಾರ ಅಜ್ಜಂಪುರಕ್ಕೆ ತೆರಳಿ ರೈಲ್ವೆ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಕಾಮಗಾರಿ ಪರಿಶೀಲನೆ ನಡೆಸಿ ವಾರದೊಳಗೆ ಕಾಲುವೆ ಕೆಲಸ ಆರಂಭಿಸುವಂತೆ ತಾಕೀತು ಮಾಡಿದರು.

ಗುತ್ತಿಗೆದಾರ ಕೋಟೇಶ್ವರ ರಾವ್, ಕಾಮಗಾರಿ ಆರಂಭಿಸಲು ಪೂರ್ತಿ ಯೂನಿಟ್ ಚಾಲನೆಗೊಳಿಸಬೇಕು. ನಾಲ್ಕು ದಿನ ರೈಲುಗಳ ಓಡಾಟ ಸಂಪೂರ್ಣ ನಿಲ್ಲಿಸಬೇಕು. ಇದು ಸಾಧ್ಯವಾದರೆ ಕಾರ್ಮಿಕರನ್ನು ಕರೆತಂದು ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಎಂದು ಸಂಸದರಿಗೆ ಮನದಟ್ಟು ಮಾಡಿಕೊಟ್ಟರು.

ಗುತ್ತಿಗೆದಾರರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ರೈಲ್ವೆ ಅಧಿಕಾರಿಗಳು, ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳು ಓಡಾಡುತ್ತವೆ. ಇವುಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ನಾಲ್ಕು ದಿನದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿಲ್ಲ. ಮುಂದಿನ ವರ್ಷ ಕಾಮಗಾರಿ ಆರಂಭಿಸಿ ಸದ್ಯ ಸೇತುವೆ ಕೆಳಗೆ ಅಳವಡಿಸಿರುವ ಪೈಪ್‌ಗಳ ಮೂಲಕವೇ ನೀರು ಹರಿಸಿ ಎಂದು ತಿಳಿಸಿದರು.

ಇದರಿಂದ ಸಿಟ್ಟಿಗೆದ್ದ ಸಂಸದ ನಾರಾಯಣಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಗೊಳಿಸುವುದು ನಮ್ಮ ಬದ್ಧತೆ ಕೆಲಸ. ಚಿತ್ರದುರ್ಗ ಜಿಲ್ಲೆಯ ರೈತರ ತಾಳ್ಮೆ ಪರೀಕ್ಷಿಸಬೇಡಿ. ಲಾಕ್‌ಡೌನಿಂದ ಪ್ಯಾಸೆಂಜರ್ ಸೇರಿ ಬಹುತೇಕ ಗೂಡ್ಸ್ ರೈಲುಗಾಡಿಗಳ ಓಡಾಟ ನಿಂತಿದೆ. ಸಂಚಾರ ಮಾಡುತ್ತಿರುವ ಕೆಲ ಗೂಡ್ಸ್ ರೈಲುಗಳ ಮಾರ್ಗ ಬದಲಿಸಿದರೆ ಕಾಮಗಾರಿ ಆರಂಭಿಸಬಹುದು ಎಂದು ಹೇಳಿದರು.

ರೈಲು ಗಾಡಿ ನಿಲ್ಲಿಸುವುದಕ್ಕೆ ರೈಲ್ವೆ ಸಚಿವರ ಜತೆ ಚರ್ಚಿಸಿ ಆದೇಶ ತರುತ್ತೇನೆ. ಸಂಜೆಯೊಳಗೆ ಅಗತ್ಯ ದಾಖಲೆ ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸದ ಸಂಸದರು, ಕೂಡಲೇ ದೂರವಾಣಿ ಮೂಲಕ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಸಂಪರ್ಕಿಸಿದಾಗ ಬೆಳಗಾವಿಯಲ್ಲಿ ಭೇಟಿಯಾಗುವಂತೆ ಸೂಚಿಸಿದರು.

ಇದರಂತೆ ಶನಿವಾರ ಸಂಜೆ ಬೆಳಗಾವಿಗೆ ತೆರಳಿ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿಯಾದ ಸಂಸದರು, ಚಿತ್ರದುರ್ಗ ಜಿಲ್ಲೆ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಪ್ರಾಮುಖ್ಯತೆ ಕುರಿತು ಮನವರಿಕೆ ಮಾಡಿಕೊಟ್ಟರು.

ಇದಕ್ಕೆ ಸ್ಪಂದಿಸಿದ ಸಚಿವರು, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ.ಸಿಂಗ್ ಅವರನ್ನು ಸಂಪರ್ಕಿಸಿ ಮೇ 15ರಿಂದ 25ರ ವರೆಗೆ ಅಜ್ಜಂಪುರ ಮಾರ್ಗವಾಗಿ ಓಡಾಡುವ ಎಲ್ಲ ರೈಲುಗಳನ್ನು ಗುಂತಕಲ್ಲು ಮಾರ್ಗವಾಗಿ ಸಂಚರಿಸುವಂತೆ ಆದೇಶ ಹೊರಡಿಸುವಂತೆ ಆದೇಶಿಸಿದ್ದಾರೆ.

ತಕ್ಷಣ ವಿಜಾಪುರದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಸಂಸದರು, ಅಲ್ಲಿರುವ ಗುತ್ತಿಗೆದಾರರು, ಕಾರ್ಮಿಕರು ಅಜ್ಜಂಪುರ ತಲುಪಲು ಪರವಾನಗಿ ನೀಡುವ ಜತೆಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಜಿಲ್ಲಾಧಿಕಾರಿ, ಕಾರ್ಮಿಕರು ಬರುವುದಕ್ಕೆ ಅನುಕೂಲ ಕಲ್ಪಿಸಿದರು.

ಆದೇಶ ತರಲು ಸಾವಿರ ಕಿಮೀ ಸಂಚಾರ: ಬೆಳ್ಗಗೆ ಅಜ್ಜಂಪುರದಲ್ಲಿ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸುವ ವೇಳೆ ರೈಲು ನಿಲುಗಡೆಗೆ ಸಂಜೆ ಕೇಂದ್ರ ರೈಲ್ವೆ ಸಚಿವರಿಂದ ಆದೇಶ ಕೊಡಿಸುವುದಾಗಿ ಹೇಳಿದ್ದ ಸಂಸದ ಎ.ನಾರಾಯಣಸ್ವಾಮಿ, ಸಭೆಯ ಬಳಿಕ ಹಿರಿಯೂರಿನಲ್ಲಿದ್ದ ಪೂರ್ವನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯತ್ತ ಪ್ರಯಾಣ ಬೆಳೆಸಿ ಸಂಜೆ 6ಕ್ಕೆ ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರನ್ನು ಭೇಟಿಯಾಗಿ 10 ದಿನಗಳ ಕಾಲ ರೈಲುಗಾಡಿಗಳ ನಿಲುಗಡೆಗೆ ಆದೇಶ ಮಾಡಿಸಿಕೊಂಡು ಚಿತ್ರದುರ್ಗಕ್ಕೆ ಮರಳಿ ಭದ್ರಾ ಮೇಲ್ದಂಡೆ ಅಧಿಕಾರಿಗಳಿಗೆ ಆದೇಶದ ಪ್ರತಿ ರವಾನಿಸುವ ಮೂಲಕ ಅಂದಾಜು 1 ಸಾವಿರಕ್ಕೂ ಹೆಚ್ಚು ಕಿ.ಮೀ. ಸಂಚರಿಸಿ ಬೆಳಗಿನ ಸಭೆಯಲ್ಲಿ ಆಡಿದ ಮಾತಿನಂತೆ ನಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net