

ಹೊಸದುರ್ಗ: ತಾಲೂಕಿನ ದೊಡ್ಡಘಟ್ಟ ಗ್ರಾಮದ ಬಳಿ ದೇವರಗುಡ್ಡ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಹಂದಿ ಹಿಡಿಯಲು ಹಾಕಿದ ಬಲೆಗೆ ಕರಡಿಯೊಂದು ಸಿಲುಕಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಮಲ್ಲಾಪುರ ಸಮೀಪ ದೇವರಗುಡ್ಡ ಅರಣ್ಯ ಪ್ರದೇಶದಲ್ಲಿ ಕಾಡುಹಂದಿ ಹಿಡಿಯಲು ಬೇಟೆಗಾರರು ಬಲೆ ಹಾಹಿದ್ದಾರೆ. ಅದರೆ, ಬಲೆಗೆ ಹಂದಿ ಬದಲು ಕರಡಿ ಬಿದ್ದಿದೆ. ಕರಡಿಯ ಚೀರಾಟ ಕೇಳಿದ ಸ್ಥಳಿಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಿಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಎರಡು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಲೆಗೆ ಸಿಲುಕಿದ್ದ ಕರಡಿಯನ್ನು ರಕ್ಷಿಸಿ ಚಿತ್ರದುರ್ಗದ ಆಡುಮಲ್ಲೇಶ್ವರ ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದರು. ಅರಣ್ಯ ರಕ್ಷಕ ರಾಘವೇಂದ್ರ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.