ಒಡೆದ ಮನಸ್ಸು ಒಂದು ಮಾಡುವುದೇ ಮತ್ತೆ ಕಲ್ಯಾಣ; ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಇಂದು ಚಾಲನೆ

SANEHALLI SWAMIJI 1
Published on

ಹೊಸದುರ್ಗ: ಬಸವಾದಿ ಶಿವಶರಣರ ಆಶಯಗಳನ್ನು ಜನಮನದಲ್ಲಿ ಬಿತ್ತುವ ಸದುದ್ದೇಶದಿಂದ ಆಯೋಜಿಸಿರುವ ಮತ್ತೆ ಕಲ್ಯಾಣ-2022 ಕಾರ್ಯಕ್ರಮಕ್ಕೆ ಸೋಮವಾರ ಬೆಳಗ್ಗೆ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ಚಾಲನೆ ದೊರೆಯಲಿದೆ.

ಶ್ರೀಮಠದಲ್ಲಿ ಸಾಣೇಹಳ್ಳಿಯು ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತತ್ವದಲ್ಲಿ ಇಷ್ಟಲಿಂಗ ದೀಕ್ಷೆ ಹಾಗೂ ಶಿವಧ್ವಜಾರೋಹಣವನ್ನು ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಬಸವಾದಿ ಶರಣರ ವಿಚಾರಧಾರೆ ಸಮಾಜಕ್ಕೆ ತಿಳಿಸುವ, ಸಮ ಸಮಾಜ ನಿರ್ಮಾಣದ ಕನಸು ನನಸಾಗಿಸುವ ಉದ್ದೇಶ ಹೊಂದಿದೆ. ಅರಿವು-ಆಚಾರಗಳಲ್ಲಿ ಸಮನ್ವಯ ಸಾಧನೆ, ಅಂತರಂಗ-ಬಹಿರಂಗ ಶುದ್ಧಿ, ಜಾತಿ, ವರ್ಣ, ವರ್ಗ, ಲಿಂಗ ಭೇದ ರಹಿತ ಸಮಾಜ ನಿರ್ಮಾಣವೇ ಮತ್ತೆ ಕಲ್ಯಾಣದ ಆಶಯ.

2019ರಲ್ಲಿ ಆರಂಭವಾದ ಮತ ಕಲ್ಯಾಣ ಕಾರ್ಯಕ್ರಮ ಕರೋನಾ ದಿನದಿಂದ 2020 ಮತ್ತು 2021ರಲ್ಲಿ ಅಂತರ್ಜಾಲದ ಮೂಲಕ ಆಯೋಜಿಸಲಾಗಿತ್ತು. ಈ ವರ್ಷ ಅರಸಿಕೆರೆ ಹಾಗೂ ತಿಪಟೂರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ಆ.1ರಿಂದ 29 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.

ಪ್ರತಿ ದಿನ ಬೆಳಗ್ಗೆ ಇಷ್ಟಲಿಂಗ ದೀಕ್ಷೆ, ಶಾಲಾ, ಕಾಲೇಜು ಮಕ್ಕಳ ಜತೆ ವಚನ ಸಂವಾದ, ಸಂಜೆ ಗ್ರಾಮಗಳಲ್ಲಿ ಎಲ್ಲ ಜಾತಿ, ಮತ, ಪಂಥದವರ ಜತೆ ಸೇರಿ ಸ್ವಾಮೀಜಿ ನೇತೃತ್ವದಲ್ಲಿ ಸಾಮರಸ್ಯ ನಡಿಗೆ ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ.

ನಿತ್ಯ ಸಂಜೆ 6ಕ್ಕೆ ಪಂಡಿತಾರಾಧ್ಯರ ನೇತೃತ್ವದಲ್ಲಿ ಶರಣರ ತಾತ್ವಿಕ ಚಿಂತನಾ ಗೋಷ್ಠಿ ನಡೆಯಲಿದೆ. ನಾಡಿನ ಗಣ್ಯರು, ಚಿಂತಕರು, ಸ್ವಾಮೀಜಿಗಳು ವಚನ ಚಳವಳಿಯ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದ ನಂತರ ಜಗದ್ಗುರು ತರಳಬಾಳು ಮಠದ ಹಿರಿಯ ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿದ ಮರಣವೇ ಮಹಾನವಮಿ ನಾಟಕವನ್ನು ಸಾಣೇಹಳ್ಳಿ ಶಿವಕುಮಾರ ಕಲಾ ಸಂಘದ ಕಲಾವಿದರು ಅಭಿನಯಿಸಲಿದ್ದಾರೆ. 12ನೇ ಶತಮಾನದ ಶರಣರ ಕಲ್ಯಾಣ ಕ್ರಾಂತಿಯ ಹಿನ್ನೆಲೆ ಹೊಂದಿರುವ ನಾಟಕವನ್ನು ರಂಗ ನಿರ್ದೇಶಕ ವೈ.ಡಿ.ಬದಾಮಿ ನಿರ್ದೇಶಿಸುವರು.

ಉದ್ಘಾಟನೆ: ಆ.1ರಂದು ಅರಸಿಕೆರೆಯಲ್ಲಿ ಮತ್ತೆ ಕಲ್ಯಾಣಕ್ಕೆ ಚಾಲನೆ ದೊರೆಯಲಿದೆ. ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನದಾಸ್ ಉದ್ಘಾಟಿಸುವರು. ಕೂಡಲ ಸಂಗಮದ ಬಸವ ಧರ್ಮಪೀಠದ ಮಾತೆ ಗಂಗಾದೇವಿ ಉಪನ್ಯಾಸ ನೀಡುವರು. ಪಂಡಿತಾರಾಧ್ಯ ಶ್ರೀಗಳು ನೇತೃತ್ವ ವಹಿಸುವರು.

ಸಮಾರೋಪ: ಆ.29ರಂದು ತಿಪಟೂರಿನಲ್ಲಿ ಸಮಾರೋಪ ನಡೆಯಲಿದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಸಮಾರೋಪ ನುಡಿ ನುಡಿಯುವರು. ತಿಪಟೂರು ಗುರುಕುಲಾಶ್ರಮದ ಶ್ರೀ ಇಮ್ಮಡಿ ಕರಿಬಸವ ದೇಶೀಕೇಂದ್ರ ಶ್ರೀ ಸಾನ್ನಿಧ್ಯ ವಹಿಸುವರು.

ಒಡೆದ ಮನಸ್ಸು ಒಗ್ಗೂಡಿಸುವ ಕಾರ್ಯ

ಮತ್ತೆ ಕಲ್ಯಾಣ ಒಡೆದ ಮನಸ್ಸುಗಳನ್ನು ಒಗ್ಗೂಡಿಸುವಂತಹ ಕಾರ್ಯಕ್ರಮ. ಸತ್ಕಾರ್ಯ, ಸಂಘಟನೆ, ಭಾವೈಕ್ಯತೆಗೆ ಪೂರಕವಾಗಿದೆ. ಜಾತ್ಯತೀತ ಮನೋಭಾವ, ಸಾಮರಸ್ಯ ಮೂಡಿಸಿ ವಿಶ್ವಬಂಧುತ್ವಕ್ಕೆ ಪ್ರೇರಕವಾಗುವಂತಹದ್ದಾಗಿದೆ. ಇದರಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ. ಊರಿನ ಜನರೇ ಚಂದಾ ಸಂಗ್ರಹಿಸಿ ಸ್ವಪ್ರೇರಣೆಯಿಂದ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಕಾರ್ಯಕ್ರಮ ನಡೆಯುವ ಗ್ರಾಮಗಳಲ್ಲಿ ಒಂದು ವಾರ ಮುಂಚೆ ಗ್ರಾಮಸ್ಥರಿಂದ ಊರಿನ ಚರಂಡಿ, ಬೀದಿ, ಶಾಲೆ, ದೇವಾಲಯ, ಸ್ವಚ್ಛತೆ, ಮನೆಗೊಂದು ಸಸಿ ವಿತರಣೆ ಹಮ್ಮಿಕೊಳ್ಳಲಾಗಿದೆ. ಊರು ಸ್ವಚ್ಛವಾಗಿದ್ದರೆ ಅನಾರೋಗ್ಯಕ್ಕೆ ಅವಕಾಶವಿರುವುದಿಲ್ಲ. ಸ್ವಚ್ಛ ಭಾರತದಂತೆ ಸ್ವಚ್ಛ ಗ್ರಾಮದ ಕಲ್ಪನೆ ಈ ಕಾರ್ಯಕ್ರಮದಿಂದ ಸಾಕ್ಷಾತ್ಕಾರಗೊಳ್ಳುವಂತಾಗಬೇಕು. ‘ಇವನಾರವ’ ಎನ್ನದೆ ‘ಇವ ನಮ್ಮವ’ ಎನ್ನುವ ಭಾವೈಕ್ಯ ಬೆಳೆಸುವಂತಾಗಬೇಕು. ಇದರಿಂದ ಸ್ಪೂರ್ತಿ ಪಡೆದು ಎಲ್ಲೆಡೆ ‘ಕಲ್ಯಾಣ ದರ್ಶನ’ವಾಗಲಿ ಎನ್ನುವುದೇ ನಮ್ಮ ಆಶಯ ಎಂದರು ಸಾಣೇಹಳ್ಳಿ ಡಾ.ಶ್ರೀ ಪಂಡಿತಾರಾಧ್ಯ ಸ್ವಾಮೀಜಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net