

ವಿಜಯವಾಣಿ ಸುದ್ದಿಜಾಲ ಉಡುಪಿ
ನಿರ್ಗತಿಕರು, ನಿರಾಶ್ರಿತರು, ಅನಾರೋಗ್ಯಕ್ಕೀಡಾದ ನಿಸ್ಸಹಾಯಕರಿಗೆ ಉಚಿತ ಸೇವೆ ನೀಡಲೆಂದು 2014ರಲ್ಲಿ ಆರಂಭಗೊಂಡ ಹೊಸಬೆಳಕು ಆಶ್ರಮಕ್ಕೆ ಅನೇಕರ ಸಹಕಾರದಿಂದ ಸ್ವಂತ ಕಟ್ಟಡ ನಿರ್ಮಿಸಲಾಗಿದ್ದು, ಮೇ 6ರಂದು ಬೆಳಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಹೊಸಬೆಳಕು ಸೇವಾ ಟ್ರಸ್ಟ್ನ ಸಂಸ್ಥಾಪಕಿ ತನುಲಾ ತರುಣ್ ಮಾಹಿತಿ ನೀಡಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ಲೋಕಾರ್ಪಣೆಗೆ ಯಾವುದೇ ಗಣ್ಯರನ್ನೂ ಆಹ್ವಾನಿಸುತ್ತಿಲ್ಲ. ಆಶ್ರಮದಲ್ಲಿರುವ ನಿವಾಸಿಗರೇ ಕಟ್ಟಡ ಉದ್ಘಾಟಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಕೌಡೂರು ಗ್ರಾಮದ ಮಾಣಿಕುಮೇರಿ ಎಂಬಲ್ಲಿ ಹೊಸಬೆಳಕು ಆಶ್ರಮವಿದ್ದು, 1.14 ಎಕರೆ ಸ್ಥಳದಲ್ಲಿ 16 ಸಾವಿರ ಚದರ್ ಅಡಿ ವಿಸ್ತೀರ್ಣದ ಕಟ್ಟಡ ನಿರ್ಮಿಸಲಾಗಿದೆ. ಸುಮಾರು 400 ಜನರಿಗೆ ವಸತಿ ನೀಡುವ ಸಾಮರ್ಥ್ಯ ಹೊಂದಿರುವ ಈ ಕಟ್ಟಡದಲ್ಲಿ ಪ್ರಸ್ತುತ 180 ಜನರು ಆಶ್ರಯ ಪಡೆದಿದ್ದಾರೆ ಎಂದರು.
ಟ್ರಸ್ಟ್ನ ಇನ್ನೋರ್ವ ಸಂಸ್ಥಾಪಕ ವಿನಯಚಂದ್ರ ಸಾಸ್ತಾನ ಮಾತನಾಡಿ, ಆಶ್ರಮದ ವತಿಯಿಂದ ಮುಂದಿನ ದಿನಗಳಲ್ಲಿ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ಭಾರತ ಸೇನೆಯಲ್ಲಿ, ಸಮಾಜ ಸೇವೆಯಲ್ಲಿ ಸಾಧನೆ ಮಾಡಿದವರಿಗೆ ಬೈಲೂರು, ಕಾರ್ಕಳ ಹಾಗೂ ಉಡುಪಿ ವ್ಯಾಪ್ತಿಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆ ನೀಡಲಾಗುವುದು. ಅಲ್ಲದೆ, ಎಂಡೋ ಸಲ್ಫಾನ್ ಪೀಡಿತ ಸುಮಾರು 200 ಜನರಿಗೆ ಆಶ್ರಮದಲ್ಲಿ ಸೇವೆ ಮಾಡಲು ಯೋಜಿಸಿದ್ದೇವೆ ಎಂದರು.
ನೊಂದ ಹಿರಿಯರ ಕೈ ಹಿಡಿದು, ಅವರಿಗೆ ಯಾವುದೇ ಕಾಯಿಲೆ ಇರಲಿ ನಗುವಿನ ಔಷಧ ನೀಡುವ ಮೂಲಕ 'ಹೊಸಬೆಳಕು' ಕಳೆದ 10 ವರ್ಷದಿಂದ ಅದೆಷ್ಟೋ ಜನರಿಗೆ ಆಸರೆಯಾಗಿದೆ. 49 ಜನರು ಮರಳಿ ಅವರ ಕುಟುಂಬ ಸೇರಿದ್ದಾರೆ. ಜೀವನದಲ್ಲಿ ನೊಂದು-ಬೆಂದ ಅನಾಥ ಜೀವಗಳಿಗೆ ಸಾಂತ್ವನ ಹೇಳುತ್ತ, ಬದುಕಿನ ಸಂಧ್ಯಾ ಕಾಲದಲ್ಲಿರುವವರಿಗೆ ಉಚಿತ ಆಶ್ರಯ ಕಲ್ಪಿಸಿ, ಅವರೆಲ್ಲರಿಗೆ ಔಷಧೋಪಚಾರ, ಆಹಾರ-ಬಟ್ಟೆ ಒದಗಿಸಿ, ಬಾಡಿದ ಜೀವಗಳಿಗೆ ಹೊಸಬೆಳಕು ಆಶ್ರಮವು ಬದುಕಿನಲ್ಲಿ ಹೊಸ ಭರವಸೆ ಕೊಟ್ಟ ನಂಬಿಕೆಯ ತಾಣವಾಗಿದೆ.