ಸೇನೇಶ್ವರ ದೇವರ ಹೊಸಕೆರೆಗೆ ಅಭಿವೃದ್ಧಿ ಮರೀಚಿಕೆ: ಕಾಯಕಲ್ಪ ಘೋಷಣೆಗಷ್ಟೇ ಸೀಮಿತ

hosa kere 1
ನೂರಾರು ವರ್ಷಗಳ ಇತಿಹಾಸವಿರುವ ಹೊಸಕೆರೆಯಲ್ಲಿ ಹೂಳು ತುಂಬಿಕೊಂಡಿರುವುದು.
Published on

ನರಸಿಂಹ ಬಿ.ನಾಯಕ್ ಬೈಂದೂರು

ರಾಜ-ಮಹಾರಾಜರ ಕಾಲದಿಂದಲೂ ಬೈಂದೂರು ಹೃದಯಭಾಗ ಹಾಗೂ ಗ್ರಾಮದೇವತೆ ಶ್ರೀ ಸೇನೆಶ್ವರ ದೇವಸ್ಥಾನದಿಂದ ಕೂಗಳತೆ ದೂರದಲ್ಲಿರುವ ನೈಸರ್ಗಿಕ ನೀರಿನ ಧಾರೆ ಈ ಹೊಸಕೆರೆ. ಕಳೆದ ಹಲವಾರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿರುವುದು ವಿಪರ್ಯಾಸ.
ಕೆರೆಯ ಮೆಟ್ಟಿಲುಗಳು ಸ್ಥಾನಪಲ್ಲಟವಾಗುತ್ತಿವೆ.

ಕೆರೆಯ ಎರಡೂ ಬದಿಗಳಲ್ಲಿ ನಿರ್ಮಿಸಿದ ಮೆಟ್ಟಿಲುಗಳು ಪ್ರಸ್ತುತ ಸ್ಥಾನಪಲ್ಲಟಗೊಂಡಿದ್ದು, ಶಿಲಾಮೆಟ್ಟಿಲುಗಳು ಒಂದೊಂದಾಗಿ ಕೆರೆಯ ಉದರ ಸೇರುತ್ತಿವೆ. ಕೆರೆ ದಂಡೆಯೂ ಶಿಥಿಲಗೊಂಡಿದ್ದು, ದಂಡೆ ಒಡೆದರೆ ಪಕ್ಕದ ಕೃಷಿಭೂಮಿಗೆ ನೀರು ನುಗ್ಗಿ ಭಾರಿ ನಷ್ಟ ಸಂಭವಿಸುವ ಸಾಧ್ಯತೆ ಇದೆ. ಈ ನೈಸರ್ಗಿಕ ಕೆರೆಯ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ವಿಶೇಷವಾಗಿ ಗಮನಿಸಬೇಕಿದ್ದು, ಇದನ್ನು ಅಭಿವೃದ್ಧಿಪಡಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಅನಿವಾರ್ಯತೆಯಿದೆ.

ಎರಡು ಬಾರಿ ಕೆರೆ ಹೂಳೆತ್ತಲಾಗಿತ್ತು

ಈ ಹಿಂದೆ ಉಡುಪಿ ಜಿಪಂ ಅಧ್ಯಕ್ಷರಾಗಿದ್ದ ಎಸ್.ರಾಜು ಪೂಜಾರಿ ಮುತುವರ್ಜಿಯಿಂದ ಜಲಾನಯನ ಇಲಾಖೆ ನಿಧಿಯಿಂದ ಎರಡು ಬಾರಿ ಹೂಳೆತ್ತುವ ಕಾರ್ಯ ನಡೆದಿತ್ತು. ಇದರಿಂದ ಸುತ್ತಮತ್ತಲಿನ ಬಾವಿಗಳಲ್ಲಿ ಅಂತರ್ಜಲ ಕೂಡ ಹೆಚ್ಚಾಗಿತ್ತು. ಈಗ ಮತ್ತೊಮ್ಮೆ ಇದರಲ್ಲಿ ಹೂಳು ತುಂಬಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಕೆ.ಗೋಪಾಲ ಪೂಜಾರಿ 1ಕೋಟಿ ರೂ. ಅನುದಾನದಲ್ಲಿ ಈ ಕೆರೆಯನ್ನು ಹೂಳೆತ್ತಿ ಪುನರುಜ್ಜೀವಗೊಳಿಸುವುದಾಗಿ ಘೋಷಿಸಿದ್ದು, ಆದರೆ ಎಷ್ಟೇ ಪ್ರಸ್ತಾಪ ಸಲ್ಲಿಸಿದ್ದರೂ ಅದು ಘೋಷಣೆಗಷ್ಟೇ ಸೀಮಿತವಾಗಿತ್ತು.

ನಂತರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಕೂಡ ಈ ಕೆರೆಯ ಅಭಿವೃದ್ಧಿಯ ಕುರಿತು ಆಸಕ್ತಿ ವಹಿಸಿರಲಿಲ್ಲ. ಈಗ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, ಪರಿಸರದಲ್ಲಿರುವ ಬಾವಿಗಳಲ್ಲಿ ನೀರಿನ ಸಮಸ್ಯೆ ಕಾಣುತ್ತಿದೆ. ಬೇಸಿಗೆಯಲ್ಲಿ ಈ ಭಾಗಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.
ಕೆರೆಯ ಅಭಿವೃದ್ಧಿ ಕುರಿತು ಹಾಲಿ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಗಮನ ಹರಿಸಬೇಕಿದ್ದು, ಶೀಘ್ರವೇ ಇದಕ್ಕೊಂದು ಕಾಯಕಲ್ಪ ನೀಡಬೇಕು. ಜತೆಗೆ ಸೂಕ್ತವಾಗಿ ಅಭಿವೃದ್ಧಿಪಡಿಸಿದಲ್ಲಿ ಈ ಕೆರೆ ಪ್ರವಾಸಿಗರಿಗೂ ಆಕರ್ಷಣೀಯ ಸ್ಥಳವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ನೂರಾರು ವರ್ಷಗಳ ಇತಿಹಾಸ

ಸುಮಾರು ಮುಕ್ಕಾಲು ಎಕ್ಕರೆಯಷ್ಟು ವಿಶಾಲವಾಗಿರುವ ಈ ಕೆರೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಈ ಕುರಿತಾದ ಶಿಲಾಶಾಸನವೂ ಇದೆ. ಶ್ರೀ ಸೇನೇಶ್ವರ ವಾರ್ಷಿಕ ಜಾತ್ರಾ ಸಂದರ್ಭದ ಶ್ರೀದೇವರ ಅವಭೃತಸ್ನಾನ ಈ ಕೆರೆಯಲ್ಲಿಯೇ ನಡೆಯುತ್ತದೆ. ಅಲ್ಲದೇ ಈ ಕೆರೆಯ ನೀರನ್ನು ಬಳಸಿ ಪರಿಸರದ ರೈತರು ಸುಗ್ಗಿ ಬೇಸಾಯ ಕೂಡ ಮಾಡುತ್ತಿದ್ದಾರೆ. ಬೈಂದೂರು ಹಾಗೂ ಆಸುಪಾಸಿನ ಹೆಚ್ಚಿನ ಮಕ್ಕಳು, ಯುವಕರು ಈಜು ಕಲಿತಿದ್ದು ಇದೇ ಕೆರೆಯಲ್ಲಿ ಎನ್ನುವುದು ವಿಶೇಷ.

ಸರ್ಕಾರಗಳು ಕೃತಕ ಈಜುಕೊಳ ನಿರ್ಮಿಸಿ ಕಾರ್ಯಕ್ರಮ ನೀಡುವ ಬದಲು ಪ್ರಕೃತಿದತ್ತವಾದ ನೈಸರ್ಗಿಕ ಕೆರೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ಕ್ರೀಡಾ ಪ್ರೇಮಿಗಳಿಗೆ, ಯುವಜನತೆಗೆ ಹಾಗೂ ಕೃಷಿಕರಿಗೆ ಲಾಭದ ಜತೆಗೆ ಹೆಚ್ಚು ಅನುಕೂಲವಾಗುತ್ತಿತ್ತು. -ಬಿ. ಕೃಷ್ಣಮೂರ್ತಿ ಕಾರಂತ್, ಬೈಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net