ಮೊಳಕೆ ಒಡೆಯುವ ಮುನ್ನ ಕೊಳೆತ ಆಲೂಗೆಡ್ಡೆ

web (2)
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆಯುವ ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದೆ. ಆಲೂಗೆಡ್ಡೆ ಬೆಳೆಯುವ 3,972 ಹೆಕ್ಟೇರ್ ಪ್ರದೇಶವಿದ್ದು, 750 ರಿಂದ 800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಮಾತ್ರ ಮೊಳಕೆಯೊಡೆಯುವ ಮುನ್ನವೇ ಕೊಳೆಯುತ್ತಿದೆ.

ಮುಂಗಾರು ಪೂರ್ವ ಮಳೆ ಬಿದ್ದಿದ್ದರಿಂದ ಮೇ ಅಂತ್ಯದಲ್ಲಿ ಬಿತ್ತನೆ ಕಾರ್ಯ ಆರಂಭವಾಗಿದ್ದು ಇದುವರೆಗಿನ ವರದಿ ಪ್ರಕಾರ ಚಿಕ್ಕಮಗಳೂರು ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 700 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ 1,200 ಹೆಕ್ಟೇರ್ ಪ್ರದೇಶದಲ್ಲಿ ಶೇ.60 ರಿಂದ 70 ರಷ್ಟು ಬಿತ್ತನೆಯಾಗಿದೆ. ಕಡೂರು ತಾಲೂಕಿನಲ್ಲಿ 700 ಹೆಕ್ಟೇರ್​ನಲ್ಲಿ 15 ಹೆಕ್ಟೇರ್ ಬಿತ್ತನೆ ಹಾಗೂ ತರೀಕೆರೆ 2000 ಹೆಕ್ಟೇರ್​ನಲ್ಲಿ ಲಿಂಗದಹಳ್ಳಿ 50 ಹೆಕ್ಟೇರ್​ನಲ್ಲಿ, ಉಳಿದಂತೆ 10 ಹೆಕ್ಟೇರ್ ಬಿತ್ತನೆ ಮಾಡಲಾಗಿದೆ.

ಚಿಕ್ಕಮಗಳೂರು ತಾಲೂಕಿನಲ್ಲಿ ಅತಿ ಹೆಚ್ಚು ಆಲೂಗೆಡ್ಡೆ ಬಿತ್ತನೆ ಮಾಡುವ ಕಸಬಾ ಹೋಬಳಿಯ ಬೀಕನಹಳ್ಳಿ, ಹಂಪಾಪುರ, ಅಲ್ಲಂಪುರ, ಮಲ್ಲೇನಹಳ್ಳಿ, ಇಂದಾವರ, ಕುರುವಂಗಿ, ಕನ್ನೇನಹಳ್ಳಿ, ತೇಗೂರು, ಕರ್ತಿಕೆರೆ ಮಲ್ಲೇದೇವರಳ್ಳಿ, ನೆಟ್ಟೆಕೆರೆಹಳ್ಳಿ, ಸಗನಿಪುರ, ಸೇರಿದಂತೆ ಹಲವು ಭಾಗದಲ್ಲಿ ಈಗಾಗಲೆ ಶೇ. 80 ರಷ್ಟು ಬಿತ್ತನೆ ಆಗಿದೆ.

ಮೂಟೆಗೆ 2,200-2,250 ರೂ. ಕೊಟ್ಟು ಹಾಸನ ಮಂಡಿಯಿಂದ ಆಲೂಗೆಡ್ಡೆ ತರಲಾಗಿದ್ದು ಅಂಬಳೆ ಹೋಬಳಿಯ ಕೋಡಿಹಳ್ಳಿ, ಸಿರಿಗಾಪುರ, ಗೌಡನಹಳ್ಳಿ, ಉಂಡಾಡಿಹಳ್ಳಿ, ಹೊಸಕೋಟೆ ರಾಮನಹಳ್ಳಿ, ಮರ್ಲೆ, ಮಲ್ಲೇದೇವರಹಳ್ಳಿ, ಕರ್ತಿಕೆರೆ, ಹರಿಹರದಹಳ್ಳಿ, ಬೀರದೇವರಹಳ್ಳಿ, ಬೈರಾಪುರ, ಮರ್ಲೆಹೊಸಳ್ಳಿ, ಮರ್ಲೆಹನುಮನಹಳ್ಳಿಯಲ್ಲಿ ಬಿತ್ತನೆ ಮಾಡಲಾಗಿದೆ.

ಮರ್ಲೆ ಗ್ರಾಮದಲ್ಲಿ ಬಿತ್ತಿರುವ ಆಲೂಗೆಡ್ಡೆ ಹೊಲದಲ್ಲೇ ಕೊಳೆಯುತ್ತಿದೆ. ಮುಗುಳವಳ್ಳಿ, ನಾಗರಹಳ್ಳಿ ಹಿರೇಮಗಳೂರು, ಮಳಲೂರು, ಬಾಣಾವರ, ಬೀಕನಹಳ್ಳಿ, ಹಂಪಾಪುರ ಹೊಲಗಳಲ್ಲಿ ಆಲೂಗೆಡ್ಡೆ ಬಿತ್ತಿ 15 ದಿನ ಕಳೆದರೂ ಮೊಳಕೆ ಚಿಗುರದೆ ಕೊಳೆತಿದೆ. ಆರಂಭದಲ್ಲೇ ನಷ್ಟಕ್ಕೆ ಸಿಲುಕಿದ ರೈತರು ಕಂಗಾಲಾಗಿದ್ದಾರೆ.

ಹಿರಿಯ ತೋಟಗಾರಿಕಾ ನಿರ್ದೇಶಕಿ ಕೆ.ಎನ್.ಪೂರ್ಣಿಮಾ ಗುರುವಾರ ಚಿಕ್ಕಮಗಳೂರು ತಾಲೂಕಿನ 20ಕ್ಕೂ ಹೆಚ್ಚು ಹೊಲಗಳಿಗೆ ಭೇಟಿ ನೀಡಿ ಎಲ್ಲೆಡೆ ಮಣ್ಣು ತೆಗೆದು ಪರಿಶೀಲಿಸಿದರು. ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಕಸಬಾ ಹೋಬಳಿ ಅರುಣ್​ಕುಮಾರ್, ಅಂಬಳೆ ಹೋಬಳಿ ಗುರುರಾಜ್ ಇದ್ದರು.

ಮಳೆ ಪ್ರಮಾಣಕ್ಕನುಗುಣವಾಗಿ ಬಿತ್ತನೆ: ಜೂನ್​ನಲ್ಲಿ ಬಿತ್ತನೆ ಚುರುಕಾಗಲಿದೆ. ಹೆಚ್ಚಿಗೆ ಮಳೆಯಾದರೆ ಸ್ವಲ್ಪ ಸಮಯ ಕಾಯುತ್ತಾರೆ. ಹದವಾದ ಮಳೆಯಾಗುತ್ತಿದ್ದರೆ ಜೂನ್ ಅಂತ್ಯದೊಳಗೆ ಬಿತ್ತನೆ ಶೇ.95 ಪೂರ್ಣಗೊಳ್ಳುತ್ತದೆ. ಮಳೆ ಕಡಿಮೆಯಾದರೆ ಜುಲೈ ಮೊದಲ ವಾರದವರೆಗೂ ಬಿತ್ತನೆ ಮುಂದುವರಿಯುತ್ತದೆ ಎಂದು ರೈತರು ತಿಳಿಸಿದ್ದಾರೆ.

8ರಂದು ಸಸ್ಯರೋಗ ತಜ್ಞರ ಭೇಟಿ: ಹಾಸನ ಎಪಿಎಂಸಿಯಿಂದಲೇ ಎಲ್ಲರೂ ಆಲೂಗೆಡ್ಡೆ ಬೀಜ ತಂದಿದ್ದಾರೆ. ಬಿತ್ತನೆ ಸಂದರ್ಭ ಮಣ್ಣಿನಲ್ಲಿ ಉಷ್ಣಾಂಶ ಹೆಚ್ಚಾಗಿದ್ದರೆ ಈ ರೀತಿ ಕೊಳೆಯುವ ಸಾಧ್ಯತೆ ಇದೆ. ಭೂಮಿಯಲ್ಲಿ ನೀರು ನಿಂತು ಕರಗುವ ಸಾಧ್ಯತೆಯೂ ಇದೆ. ಆದರೆ ಅಂತಹ ಮಳೆ ಬಂದಿಲ್ಲ. ವಾತಾವರಣ ಹದವಾಗಿದೆ. ಬಿತ್ತನೆ ಸಂದರ್ಭದಲ್ಲಿ ಹವಾಮಾನ ವೈಪರೀತ್ಯ ಆಗಿರುವ ಸಾಧ್ಯತೆ ಇದೆ. ಬೇರೆ ಭಾಗಗಳಲ್ಲೂ ಸ್ಥಳ ಪರಿಶೀಲಿಸಿ ಬಿತ್ತನೆ ಬೀಜದಿಂದಲೇ ಸಮಸ್ಯೆಯಾಗಿದ್ದರೆ ಕ್ರಮಕೈಗೊಳ್ಳಲಾಗುತ್ತದೆ. ಜೂ.8ರಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ತಜ್ಞರನ್ನು ಸ್ಥಳಕ್ಕೆ ಕರೆಸಿ ಕಾರಣ ಹುಡುಕಲು ಪ್ರಯತ್ನಿಸಿ ಪರಿಹಾರ ಕಲ್ಪಿಸಲಾಗುವುದು ಎಂದು ತಾಲೂಕು ಹಿರಿಯ ತೋಟಗಾರಿಕಾ ನಿರ್ದೇಶಕಿ ಕೆ.ಎನ್.ಪೂರ್ಣಿಮಾ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net