

ಮಂಡ್ಯ: ನಗರದ ಹೃದಯ ಭಾಗದಲ್ಲಿರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗವನ್ನು ನ್ಯಾಯಾಂಗ ಇಲಾಖೆಗೆ ಮಂಜೂರು ಮಾಡಿರುವುದನ್ನು ರದ್ದು ಪಡಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಈ ಜಾಗವನ್ನು ತೋಟಗಾರಿಕೆ ಇಲಾಖೆಯಲ್ಲಿಯೇ ಮುಂದುವರೆಸುವುದು ಸರ್ಕಾರದ ನಿಲುವಾಗಿದೆ. ಅದರಂತೆ ಈಗಾಗಲೇ ಆದೇಶವನ್ನೂ ಹೊರಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ತೋಟಗಾರಿಕೆ ಕ್ಷೇತ್ರದ ಸರ್ವೇ ನಂಬರ್ 167, 168 ಮತ್ತು 210ರಲ್ಲಿರುವ 3 ಎಕರೆ 30 ಗುಂಟೆ ಜಮೀನಿನ ಪೈಕಿ ತೋಟಗಾರಿಕಾ ಇಲಾಖಾ ಕಟ್ಟಡ ಮತ್ತು ಪ್ರಯೋಗ ಶಾಲೆಗಳನ್ನು ಹೊರತುಪಡಿಸಿ ಉಳಿದ 2 ಎಕರೆ 30 ಗುಂಟೆ ಜಮೀನನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರ ಮಾಡಲು 2022ರ ಏ.11ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಮಂಡ್ಯ ತೋಟಗಾರಿಕೆ ಕ್ಷೇತ್ರದ ಸರ್ವೇ ನಂಬರ್ 167, 168, 169, 170 ಮತ್ತು 210ರಲ್ಲಿ ಒಟ್ಟು 12.33 ಎಕರೆ ಪ್ರದೇಶವಿದ್ದು, ಸಸ್ಯ ಸಂಪತ್ತು ಮತ್ತು ಮೂಲಸೌಕರ್ಯಗಳಿಂದ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಸದರಿ ಕ್ಷೇತ್ರದಲ್ಲಿ ತೆಂಗು, ಸಪೋಟ, ಸೀಬೆ, ಸೀತಾಫಲ, ಪನ್ನೇರಳೆ, ಮಾವು, ಬೇಲಿ, ಬಟರ್ ಫ್ರೂಟ್, ಹಣಸೆ ಸೇರಿ ಒಟ್ಟಾರೆ 572 ಸಂಖ್ಯೆಯ ಮರಗಳಿವೆ. ತೋಟಗಾರಿಕೆ ಇಲಾಖೆಯ ಜಮೀನನ್ನು ಅನ್ಯ ಉದ್ದೇಶಗಳಿಗೆ ಮಂಜೂರು ಮಾಡುವ ಮುನ್ನ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿಯ ಒಪ್ಪಿಗೆ ಪಡೆಯಬೇಕೆಂಬ ಕಡ್ಡಾಯ ನಿಯಮ ಇರುತ್ತದೆ ಎಂದು ವಿವರಿಸಿದ್ದಾರೆ.
ಇನ್ನು ತೋಟಗಾರಿಕಾ ಇಲಾಖೆಗೆ ಸೇರಿದ ಹಸಿರು ಜಮೀನನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರ ಮಾಡಿದ್ದಕ್ಕೆ ಮಂಡ್ಯ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಪರ ಮತ್ತು ವಿರೋಧದ ಪ್ರತಿಭಟನೆ ನಡೆದಿದ್ದವು. ಅಂತಿಮವಾಗಿ ಜಮೀನನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದನ್ನು ಸ್ಮರಿಸಬಹುದು.