

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇಶದಲ್ಲಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ತೋಟಗಾರಿಕೆ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಲಾಲ್‌ಬಾಗ್ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಪ್ರಕಾಶ್ ಎಂ.ಸೊರಬ ಹೇಳಿದರು.
ದೇವನಹಳ್ಳಿ ತಾಲೂಕು ಹೊಸಹುಡ್ಯದಲ್ಲಿ ಶನಿವಾರ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ, ಬೆಂಗಳೂರು ತೋಟಗಾರಿಕೆ ವಿದ್ಯಾಲಯ ಸಹಯೋಗದಲ್ಲಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ, ರೇಷ್ಮೆ, ತೋಟಗಾರಿಕೆ ಸೇರಿ ಕೃಷಿಗೆ ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ರೈತರಿಗೆ ಮತ್ತಷ್ಟು ಪ್ರೋತ್ಸಾಹದ ಜತೆಗೆ ಕೃಷಿ ಚಟುವಟಿಕೆಯಲ್ಲಿ ಸಹಕಾರ ನೀಡಿದರೆ ಭವಿಷ್ಯದಲ್ಲಿ ರಾಜ್ಯದ ಕೃಷಿ ಕ್ಷೇತ್ರ ಮತ್ತಷ್ಟು ಪ್ರವರ್ಧಮಾನಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ತೋಟಗಾರಿಕೆ ಕ್ಷೇತ್ರದ ಪ್ರಗತಿ ಗಮನಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೋಟಗಾರಿಕೆ ಉತ್ಪಾದನೆಯನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಹಳ್ಳಿಕಾರ್ ತಳಿ ಸಂರಕ್ಷಣೆ ಅಗತ್ಯ: ಪ್ರಸ್ತುತ ದಿನಗಳಲ್ಲಿ ಹಳ್ಳಿಕಾರ್ ತಳಿಯ ಗೋವುಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಹಳ್ಳಿಕಾರ್ ತಳಿ ಗೋವು ಸಂರಕ್ಷಕ ಹಾಗೂ ಪ್ರಗತಿಪರ ರೈತ ವರ್ತೂರ್ ಸಂತೋಷ್ ಹೇಳಿದರು. ತೋಟಗಾರಿಕೆ ವಸ್ತುಪ್ರದರ್ಶನ ಮಳಿಗೆ ಉದ್ಘಾಟಿಸಿ ಮಾತನಾಡಿದರು. ರೈತರು ಹಳ್ಳಿಕಾರ್ ತಳಿ ಗೋವುಗಳನ್ನು ಸಾಕಲು ಮನಸ್ಸು ಮಾಡಬೇಕು. ಇದರಿಂದ ಈ ಮಹತ್ತರ ತಳಿಯನ್ನು ರಕ್ಷಿಸಿ ಪೋಷಿಸಿದಂತಾಗುತ್ತದೆ ಮುಂದಿನ ಪೀಳಿಗೆಗೆ ನೀವು ಕೊಡುವ ಕೊಡುಗೆಯಾಗಲಿದೆ ಎಂದರು. ಇದೇ ವೇಳೆ ಹಳ್ಳಿಕಾರ್ ತಳಿ ಗೋವಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು. ಜತೆಗೆ ಅದರ ಮಹತ್ವದ ಬಗ್ಗೆ ಕಿರುಪರಿಚಯ ಮಾಡಿಕೊಟ್ಟರು. ವಿಜ್ಞಾನಿ ಜಿ.ಎಸ್ ಪ್ರಕಾಶ್ ಮಾತನಾಡಿ ಯುವ ವಿಜ್ಞಾನಿಗಳಿಗಿರಬೇಕಾದ ಗುಣಗಳ ಬಗ್ಗೆ ತಮ್ಮ ಅನುಭವದ ಕೆಲವು ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಲಹೆ ನೀಡಿದರು.
ಇಲಾಖೆಯಿಂದ ನೆರವು: ತೋಟಗಾರಿಕೆ ಬೆಳೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ತೋಟಗಾರಿಕೆ ಇಲಾಖೆ ಎಲ್ಲ ಸವಲತ್ತುಗಳನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದೆ ಎಂದು ಗ್ರಾಮಾಂತರ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ ಹೇಳಿದರು. ತೋಟಗಾರಿಕೆ ಉಪಕರಣ, ಬಿತ್ತನೆ ಬೀಜ ಸೇರಿ ವಿವಿಧ ಕಾರ್ಯಾಗಾರಗಳ ಮೂಲಕ ತೋಟಗಾರಿಕೆ ಬೆಳೆಗಾರರಿಗೆ ಎಲ್ಲ ಬಗೆಯ ಮಾಹಿತಿ ಜತೆಗೆ ಸಹಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿಜ್ಞಾನಿಗಳು ಹಾಗೂ ರೈತರ ಸಂವಾದ:
ಹೊಸಹುಡ್ಯದಲ್ಲಿ ತೋಟಗಾರಿಕೆ ಕಾರ್ಯಾನುಭವ ಕಾರ್ಯಕ್ರಮದ ಸಮರೋಪ ಸಮಾರಂಭ ನಡೆಯಿತು ಇದೇ ವೇಳೆ ತೋಟಗಾರಿಕೆ ವಸ್ತುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವಿವಿಧ ತೋಟಗಾರಿಕೆ ಬೆಳೆಗಳ ಕುರಿತು ವಿಜ್ಞಾನಿಗಳು ಹಾಗೂ ರೈತರ ನಡುವ ಸಂವಾದ ಕಾರ್ಯಕ್ರಮ ನಡೆಯಿತು. ವಿವಿಧ ಕೃಷಿ ಪರಿಕರ, ಸಲಕರಣೆ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ತಳಿಯ ಜಾನುವಾರಗಳ ಪ್ರದರ್ಶನ ಗಮನ ಸೆಳೆಯಿತು. ಜಲಕೃಷಿ ಪ್ರಾತ್ಯಕ್ಷತೆ ಜತೆಗೆ ವಿದ್ಯಾರ್ಥಿಗಳಿಗೆ ಕೃಷಿ ವಿಜ್ಞಾನದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.