ಈರುಳ್ಳಿ ಬೆಳೆ ರಕ್ಷಣೆ ಸವಾಲು

dj clk erulli
Published on

ಚಳ್ಳಕೆರೆ: ಈರುಳ್ಳಿ ನಾಜೂಕಿನ ಬೆಳೆಯಾಗಿದ್ದು, ನೀರು ಹೆಚ್ಚು ಮತ್ತು ಕಡಿಮೆಯಾದರೂ ಕೈಗೆ ಬೆಳೆ ಸಿಗುವುದಿಲ್ಲ. ಅದರಲ್ಲೂ ಮಳೆಗಾಲದಲ್ಲಿ ಈರುಳ್ಳಿ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ಸವಾಲಿನ ಕೆಲಸ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಆರ್.ವಿರೂಪಾಕ್ಷಪ್ಪ ಹೇಳಿದರು.

ತಾಲೂಕಿನಲ್ಲಿ ಕಳೆದ ಐದಾರು ದಿನಗಳಿಂದ ಅತಿ ಹೆಚ್ಚು ಮಳೆ ಆಗಿರುವ ಹಿನ್ನೆಲೆಯಲ್ಲಿ ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಹೊಸಮುಚ್ಚುಗುಂಟೆ, ಜನ್ನೇನಹಳ್ಳಿ ಭಾಗದ ಈರುಳ್ಳಿ ಬೆಳೆದಿರುವ ಜಮೀನುಗಳಿಗೆ ಶುಕ್ರವಾರ ಭೇಟಿ ನೀಡಿ, ಬೆಳೆ ಪರಿಶೀಲಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಏರುಮಡಿ ಮಾಡಿ ಈರುಳ್ಳಿ ನಾಟಿ ಮಾಡುತ್ತಿಲ್ಲ. ಇದರಿಂದ ಮಳೆ ನೀರು ಬೆಳೆ ನಡುವೆ ಹರಿಯುವುದರಿಂದ ಜಮೀನಿನ ಫಲವತ್ತತೆ ಮಣ್ಣು ಕೊಚ್ಚಿ ಹೋಗುತ್ತದೆ. ಜಮೀನಿನ ತಗ್ಗುಭಾಗದಲ್ಲಿ ಈರುಳ್ಳಿ ನಾಟಿ ಮಾಡಬಾರದು. ಜಮೀನಿನಲ್ಲಿ ನಿಂತ ಮಳೆ ನೀರನ್ನು ತಕ್ಷಣವೇ ಕಾಲುವೆ ಮಾಡಿ ಹೊರ ಹೋಗುವಂತೆ ನೋಡಿಕೊಳ್ಳಬೇಕು ಎಂದರು.

ಶಿಲೀಂಧ್ರ ಮತ್ತು ಕಳೆ ನಾಶಕ ಔಷಧಗಳ ಸಿಂಪಡಣೆಯಿಂದ ತೇವಾಂಶದಲ್ಲಿನ ಬೆಳೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕಿನ ರಾಮಜೋಗಿಹಳ್ಳಿ, ಸಾಣೀಕೆರೆ ಪಂಚಾಯಿತಿ ವ್ಯಾಪ್ತಿಯ ಎರೆಭೂಮಿ ಸೇರಿ 500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ನಾಟಿ ಮಾಡಲಾಗಿದೆ. ಇದು 90 ದಿನಗಳ ಬೆಳೆಯಾಗಿದೆ. ಈಗಾಗಲೇ ಎರಡು ತಿಂಗಳ ಅವಧಿಗೆ ಬಂದಿರುವ ಈರುಳ್ಳಿ ಬೆಳೆ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿದೆ. ಇದರಿಂದ 100 ಎಕರೆಯಷ್ಟು ಬೆಳೆ ನಷ್ಟವಾಗಿರಬಹುದು ಎಂದು ತಿಳಿಸಿದರು.

ವಿಮೆ ಕಟ್ಟಿರುವ ರೈತರು ಕೂಡಲೇ ಕಂಪನಿಗೆ ಬೆಳೆ ನಷ್ಟದ ಬಗ್ಗೆ ಮಾಹಿತಿ ನೀಡಬೇಕು. ತಕ್ಷಣವೇ ಗ್ರಾಮ ಲೆಕ್ಕಾಧಿಕಾರಿ ಮೂಲಕ ಕಂದಾಯ ಇಲಾಖೆಗೆ ಪಹಣಿ, ಆಧಾರ್ ಕಾರ್ಡ್ ದಾಖಲೆ ಸಹಿತ ಸರ್ಕಾರಿ ಸೌಲಭ್ಯಕ್ಕೆ ಅವಕಾಶ ಮಾಡಿಕೊಳ್ಳಬೇಕು ಎಂದರು.

ಹೋಬಳಿ ಮಟ್ಟದ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಬಿ.ವಿ.ಪ್ರವೀಣ್‌ಕುಮಾರ್, ರೈತರಾದ ಆರ್.ಚಿದಾನಂದಪ್ಪ, ಎಂ.ಎಲ್.ತಿಮ್ಮಾರೆಡ್ಡಿ, ಬಿ.ನಾಗರಾಜ, ಗಿರೀಶ್‌ರೆಡ್ಡಿ, ಸಿ.ಮಹಾಂತೇಶ್, ಅಭಿಲಾಷ್, ವೈ.ತಿಪ್ಪೇಸ್ವಾಮಿ, ಚಂದ್ರಪ್ಪ, ಕೆ.ಶ್ರೀನಿವಾಸರೆಡ್ಡಿ ಇತರರಿದ್ದರು.

ವಿಮಾ ಕಂಪನಿ ಸ್ಪಂದನೆ ಶೂನ್ಯ ಆರೋಪ: ಮಳೆಯಿಂದ ಬೆಳೆ ನಷ್ಟವಾಗಿರುವ ಬಗ್ಗೆ ಮಾಹಿತಿ ಸಲ್ಲಿಸಲು ವಿಮಾ ಕಂಪನಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗ್ರಾಮ ಲೆಕ್ಕಾಧಿಕಾರಿ ಜಮೀನಿಗೆ ಭೇಟಿ ನೀಡುವುದಾಗಿ ಹೇಳಿ 7 ದಿವಸ ಆಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ವೈ.ಟಿ.ತಿಪ್ಪೇಸ್ವಾಮಿ ದೂರಿದರು.

ರೈತರಿಂದ ವಿಮೆ ಕಟ್ಟಿಸಿಕೊಳ್ಳಲು ಕಾಳಜಿ ತೋರಿಸುವ ಇಲಾಖೆ ಮತ್ತು ವಿಮಾ ಕಂಪನಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವುದಿಲ್ಲ. ವಿಮಾ ಕಂಪನಿ ಹೆಲ್ಪ್‌ಲೈನ್ ದೂರವಾಣಿ ಸಂಖ್ಯೆಗಳು ಕೆಲಸ ಮಾಡುತ್ತಿಲ್ಲ. ಇದರಿಂದ ಬೆಳೆ ಕಳೆದುಕೊಂಡಿರುವ ರೈತರಲ್ಲಿ ಆತಂಕ ಎದುರಾಗಿದೆ.

ಮುಂಗಾರಿನಿಂದ ಈತನಕ ಬಂದಿರುವ ಮಳೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಿಸಿ, ಶೇಂಗಾ, ತೊಗರಿ, ಈರುಳ್ಳಿ, ಮೆಕ್ಕೆಜೋಳ ಇತರ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net