ರೇಷ್ಮೆ ಮಾರುಕಟ್ಟೆಗೆ ಡಿಪಿಆರ್: ಮಾವು ಸಂಸ್ಕರಣ ಘಟಕಕ್ಕೆ ತೋಟಗಾರಿಕೆ ಇಲಾಖೆ ಭೂಮಿ

15 rama silk marter DPR
Published on

ರಾಮನಗರ: ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಸುಸಜ್ಜಿತ ರೇಷ್ಮೆ ಮಾರುಕಟ್ಟೆ ಹಾಗೂ ಮಾವು ಸಂಸ್ಕರಣ ಘಟಕಗಳ ಸ್ಥಾಪನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರೇಷ್ಮೆ ಮತ್ತು ತೋಟಗಾರಿಕೆ ಸಚಿವ ಡಾ. ಕೆ.ಸಿ. ನಾರಾಯಣಗೌಡರ ಜತೆ ಬೆಂಗಳೂರಿನಲ್ಲಿ ಗುರುವಾರ ಮಾತುಕತೆ ನಡೆಸಿದರು.

ರೇಷ್ಮೆ ಮಾರುಕಟ್ಟೆ ನಿರ್ವಣಕ್ಕೆ ಈಗಾಗಲೇ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಟೆಂಡರ್ ಕರೆಯಲಾಗಿದೆ. ಅದು ಮುಗಿದ ನಂತರ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು. ಇದಕ್ಕಾಗಿ ರಾಮನಗರ ಮತ್ತು ಚನ್ನಪಟ್ಟಣದ ನಡುವೆ 11 ಎಕರೆ ಸ್ಥಳ ಗುರುತಿಸಲಾಗಿದ್ದು ಅಲ್ಲಿಯೇ ಸುಸಜ್ಜಿತ ಮಾರುಕಟ್ಟೆ ತಲೆ ಎತ್ತಲಿದೆ. ಇದಕ್ಕಾಗಿ ನಬಾರ್ಡ್ 50 ಕೋಟಿ ರೂ. ಸಾಲ ನೀಡುತ್ತಿದ್ದು, ಸರ್ಕಾರ ಯಾವುದೇ ಹೂಡಿಕೆ ಮಾಡುತ್ತಿಲ್ಲ ಎಂದು ಮಾತುಕತೆ ನಂತರ ಉಪಮುಖ್ಯಮಂತ್ರಿ ತಿಳಿಸಿದರು.

ದ್ವಿತಳಿ, ಮಿಶ್ರತಳಿ ಗೂಡಿಗೆ ಪ್ರತ್ಯೇಕ

ಈ ಜಾಗದಲ್ಲಿ ರೇಷ್ಮೆಯ ದ್ವಿತಳಿ, ಮಿಶ್ರತಳಿ ಗೂಡು ಖರೀದಿ ಕೇಂದ್ರಗಳನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಲಾಗುವುದು. ಮಾರುಕಟ್ಟೆಗೆ ಬರುವ ರೈತರು ರಾತ್ರಿ ವೇಳೆ ತಂಗಲು ವಸತಿ ವ್ಯವಸ್ಥೆ ಜತೆಗೆ ಸುಲಭ ಹಣಕಾಸು ವ್ಯವಹಾರಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆಯೂ ರ್ಚಚಿಸಲಾಯಿತು ಎಂದು ಡಿಸಿಎಂ ಹೇಳಿದರು.

ದತ್ತಾಂಶ ಸಂಗ್ರಹ

ನೂತನ ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಮಾರಾಟ ಮಾಡುವ ರೈತರ ಹಾಗೂ ಗೂಡಿನ ದತ್ತಾಂಶವನ್ನು ಸಂಗ್ರಹ ಮಾಡಲಾಗುವುದು. ಅತ್ಯುತ್ತಮ ಗೂಡು ಉತ್ಪಾದನೆ ಮಾಡುವ ರೈತರ ಮಾಹಿತಿ ಸಮಗ್ರವಾಗಿ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಡಿಸಿಎಂ ತಿಳಿಸಿದರು.

ಮಾವು ಸಂಸ್ಕರಣಾ ಘಟಕ

ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಂಡು ರಾಮನಗರ ತಾಲೂಕಿನ ಕೈಲಾಂಚ ಗ್ರಾಮದ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮಾವು ಸಂಸ್ಕರಣಾ ಘಟಕಕ್ಕೆ ರೇಷ್ಮೆ ಇಲಾಖೆ ತನ್ನ ಅಧೀನದಲ್ಲಿರುವ 25 ಎಕರೆ ಭೂಮಿಯನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರ ಮಾಡಲು ಒಪ್ಪಿದೆ. ಈ ವಿಷಯವನ್ನು ಕೂಡ ಮಾತುಕತೆ ವೇಳೆ ಅಂತಿಮಗೊಳಿಸಲಾಗಿದೆ. ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಭೂಮಿ ಹಸ್ತಾಂತರ ಪ್ರಕ್ರಿಯೆಗೆ ಇಂದೇ ಚಾಲನೆ ನೀಡಿದ್ದಾರೆ. ಅದಕ್ಕೆ ತೋಟಗಾರಿಕೆ ಸಚಿವರ ಪೂರ್ಣ ಸಹಕಾರ ಸಿಕ್ಕಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net