

ಸಾಸ್ವೆಹಳ್ಳಿ: ರೈತರು ತೋಟ ಮತ್ತು ಜಮೀನುಗಳಲ್ಲಿ ಕಳೆನಾಶಕದಂತಹ ರಾಸಾಯನಿಕ ಸಿಂಪಡನೆ ಮಾಡುವುದನ್ನು ಕಡಿಮೆ ಮಾಡಬೇಕು. ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾಹಿತಿ ಪಡೆದು ತೋಟಗಾರಿಕಾ ಬೆಳೆಗಳ ನಿರ್ವಹಣೆ ಮಾಡುವುದರಿಂದ ನಿರೀಕ್ಷಿತ ಬೆಳೆ ಪಡೆಯಬಹುದು ಎಂದು ಹೊನ್ನಾಳಿ ತಾಲೂಕು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ತಿಳಿಸಿದರು.
ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ರೈತರ ತೋಟಗಳಿಗೆ ಸೋಮವಾರ ಭೇಟಿ ನೀಡಿ, ರೈತರಿಗೆ ಅಡಕೆ ತೋಟಗಳಲ್ಲಿ ಕಂಡುಬಂದ ಕೆಂಪು ನುಸಿ ರೋಗ, ಕರಿ ಇರುವೆಗಳ ಬಾಧೆ ಮುಂತಾದ ರೋಗ ಲಕ್ಷಣಗಳ ಮಾಹಿತಿಯನ್ನು ನೀಡಿದರು.
ತೋಟಗಳಲ್ಲಿ ಸಾಲುಗಳಿಂದ ಸಾಲಿಗೆ ಟ್ರಂಚ್ ಮಾಡಬೇಕು, ರಾಸಾಯನಿಕ ಗೊಬ್ಬರಗಳ ಬಳಕೆಯ ಮೇಲೆ ಹಿಡಿತವಿರಲಿ, ಆರ್ಗನಿಕ್ ಗೊಬ್ಬರ ಎಂದು ಹೇಳಿ ಮಾರಾಟ ಮಾಡಲು ಬರುವವರ ಬಗ್ಗೆ ರೈತರು ಎಚ್ಚರ ವಹಿಸಬೇಕು ಎಂದರು.
ಸಹಾಯಕ ಕೃಷಿ ಅಧಿಕಾರಿ ರಮೇಶ್ ಹಿಪ್ಪಿನಕೊಪ್ಪ ಮಾತನಾಡಿ, ವಾತಾವರಣದಲ್ಲಿ ಒಣ ಹವೆ ಹೆಚ್ಚಾಗಿದೆ. ಅಲ್ಲದೆ ಜಮೀನುಗಳಲ್ಲಿ ಬಳಸುವ ಗೊಬ್ಬರದಿಂದ ಯೂರಿಯಾ ಪ್ರಮಾಣ ಹೆಚ್ಚಾಗಿದೆ. ಇದರಿಂದ ಅಡಕೆ ಬೆಳೆಯಲ್ಲಿ ನುಸಿ ಬಾಧೆ ಹೆಚ್ಚಾಗಿ ಕಂಡುಬಂದಿದೆ ಎಂದರು.
ತೋಟಗಳಲ್ಲಿ ಹಸಿರು ಹೆಚ್ಚಾಗಿರಬೇಕು. ಆದ್ದರಿಂದ ಜಮೀನುಗಳಲ್ಲಿ ಡಯಂಚಾ ಸೆಣಬು ಹಾಕಬೇಕು ಎಂದು ಸಲಹೆ ನೀಡಿದರು.