ತೋಟಗಾರಿಕೆ ಬೆಳೆಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ

jss
Published on

ಮೈಸೂರು: ತೋಟಗಾರಿಕೆ ಬೆಳೆಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿವೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜು ಹೇಳಿದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ರೈತರ ಶಿಬಿರದಲ್ಲಿ ಸಮಾರೋಪ ಭಾಷಣ ಮಾಡಿದರು. ರೈತರು ಸಾವಯವ ಕೃಷಿಗೆ ಒತ್ತುಕೊಡಬೇಕು, ಭೂಮಿಗೆ ನೈಸರ್ಗಿಕ ಗೊಬ್ಬರಗಳನ್ನು ನೀಡುವುದರಿಂದ ಉತ್ತಮ ಪೋಷಕಾಂಶಗಳು ಬೆಳೆೆಗೆ ದೊರೆಯುತ್ತವೆ. ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಮಣ್ಣು, ನೀರು ಪರೀಕ್ಷೆಗಳನ್ನು ಆಗಾಗ್ಗೆ ಮಾಡಿಸಬೇಕು. ಅಡಿಕೆ, ತೆಂಗು, ಮಾವು, ಬಾಳೆಯ ಜೊತೆಗೆ ಅಲಂಕಾರಿಕ ಹೂವುಗಳನ್ನು ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಸಿಗುತ್ತದೆ ಎಂದು ತಿಳಿಸಿದರು.

ಎಸ್‌ಬಿಐ ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಬಿ.ಎನ್. ನಾಗೇಶ್ ಮಾತನಾಡಿ, ಕೃಷಿಚಟುವಟಿಕೆಗೆ ಸಂಬಂಧಿಸಿದ ಉತ್ತಮ ಮಾಹಿತಿಗಳು ಶಿಬಿರದಿಂದ ದೊರಕಿವೆ. ಬ್ಯಾಂಕುಗಳು ಕೃಷಿಗೆ ವಿಶೇಷ ಮಹತ್ವವನ್ನು ಕೊಟ್ಟು ಸಾಲ ಸೌಲಭ್ಯಗಳನ್ನು ಒದಗಿಸಿವೆ. ಕೃಷಿಗೆ ಯೋಗ್ಯವಾದ ಭೂಮಿಯನ್ನು ಪಾಳು ಬೀಳಿಸದೆ ವ್ಯವಸಾಯ ಮಾಡಬೇಕು. ರೈತರು ಬೆಳೆದ ಬೆಳೆಗಳನ್ನು ಸಾಧ್ಯವಾದಷ್ಟು ಸ್ವತಃ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಮಾರಿದರೆ ಉತ್ತಮ ಬೆಲೆ ಸಿಗುತ್ತದೆ ಎಂದು ತಿಳಿಸಿದರು.

ಸಹಜ ಸಮೃದ್ಧ ಸಂಸ್ಥೆಯ ಸಂಸ್ಥಾಪಕ ಜಿ. ಕೃಷ್ಣಪ್ರಸಾದ್ ಮಾತನಾಡಿ, ಕೃಷಿಯ ಮೂಲ ಬೀಜ. ಆಯಾಯ ಭೌಗೋಳಿಕ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಬಿತ್ತನೆ ಬೀಜಗಳನ್ನು ಬಳಕೆ ಮಾಡಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ದೇಶಿಯ ಬೀಜಗಳಿಗೆ ಹೆಚ್ಚು ಬೇಡಿಕೆ ಇದೆ. ಇಳುವರಿಯು ಬಿತ್ತನೆ ಬೀಜಗಳಿಂದ ಅಷ್ಟೇ ಅಲ್ಲದೆ ಅನುಸರಿಸುವ ಕೃಷಿ ಪದ್ಧತಿಯನ್ನು ಅವಲಂಬಿಸಿರುತ್ತದೆ. ವಿಷಮುಕ್ತವಾದ ವ್ಯವಸಾಯವನ್ನು ಮಾಡಬೇಕು ಎಂದು ತಿಳಿಸಿದರು.

ಪ್ರಗತಿಪರ ರೈತ ಪಿ. ಶಿವಕುಮಾರಸ್ವಾಮಿ ಮಾತನಾಡಿ, ಬೇಸಾಯವು ಪ್ರಯೋಗಾತ್ಮಕವಾಗಿದ್ದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಜನರ ಅಗತ್ಯತೆ ಅರಿತು ಸೂಕ್ತ ಬೆಳೆಗಳನ್ನು ಬೆಳೆದು ಲಾಭ ಗಳಿಸಿ ರೈತರು ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.

ಮೈಸೂರು ಆಕಾಶವಾಣಿಯ ಕಾರ್ಯನಿರ್ವಾಹಕ ಎನ್. ಕೇಶವಮೂರ್ತಿ ಮಾತನಾಡಿ, ಭಾರತೀಯ ಕೃಷಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಕೃಷಿಯೇ ನಮ್ಮ ಬದುಕಾಗಿತ್ತು. ಒಂದು ತುಂಡು ಜಮೀನಿನಲ್ಲಿ ಜೀವನ ಕಲ್ಪಿಸಿಕೊಳ್ಳುವುದು ಒಂದು ಕಲೆ. ಭಾರತೀಯರು ಆಚರಿಸುವ ಹಬ್ಬಗಳು ಮತ್ತು ಕೃಷಿ ಸಂಸ್ಕೃತಿಯ ನಡುವೆ ಸಂಬಂಧವಿದೆ. ಸಮುದಾಯಗಳನ್ನು ಒಟ್ಟುಗೂಡಿಸುವ ಶಕ್ತಿ ಇರುವುದು ಕೃಷಿಗೆ ಮಾತ್ರ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net