

ಚಿಕ್ಕಮಗಳೂರು: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಎರಡು ಕಾರುಗಳ ಮಧ್ಯೆ ಧೂಳೆಬ್ಬಿಸಿಕೊಂಡು ಸಾಗಿ ಭಯಂಕರ ಅಪಘಾತವೊಂದು ಸಂಭವಿಸಿದೆ. ಕಾರು ನುಗ್ಗಿದ ರಭಸಕ್ಕೆ ಭಾರಿ ಧೂಳೆದಿದ್ದು, ಸುತ್ತಮುತ್ತಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ಬಳಿ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಎರಡು ಕಾರುಗಳು ಬಹುತೇಕ ಜಖಂಗೊಂಡಿವೆ. ಕಾರು ನುಗ್ಗಿ ಸಂಭವಿಸಿದ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರು ಸಾಗಿದ ದಾರಿಯಲ್ಲಿ ಆ ಸಮಯದಲ್ಲಿ ಯಾರೂ ಇಲ್ಲದ್ದರಿಂದ ಅದೃಷ್ಟವಶಾತ್ ಭಾರಿ ಸಾವು-ನೋವು ತಪ್ಪಿದೆ. ಆದರೆ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.