

ಐಮಂಗಲ (ಚಿತ್ರದುರ್ಗ): ಹಿರಿಯೂರು ತಾಲೂಕು ಗೊಲ್ಲಹಳ್ಳಿ ಸಮೀಪ ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಬಸ್-ಲಾರಿ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಾಲಾಪುರ ಗ್ರಾಮದ ರವಿ (23), ಬಸವಾಪುರದ ಮಾಬಮ್ಮ (35), ಪರಸಾಪುರ ಗ್ರಾಮದ ರಮೇಶ (28), ನರಸಣ್ಣ (5), ಬೆಂಗಳೂರು ಮೂಲದ ಪಾರ್ವತಮ್ಮ (50) ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿಯಿಂದ ಹೊರಟಿದ್ದ ಕಲ್ಯಾಣ ಕರ್ನಾಟಕ ಸಾರಿಗೆಯ ಬಸ್, ಬಳ್ಳಾರಿ, ಚಳ್ಳಕೆರೆ ಮಾರ್ಗದ ಮೂಲಕ ಹಿರಿಯೂರು ಕಡೆ ತೆರಳುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ, ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.
ಶಿವರಾಜು, ಮೌಲಸಾಬ್, ಫಾತೀಮಾ, ಖಾಸೀಂ ಬಿ, ಯಲ್ಲಮ್ಮ, ಮಲ್ಲಮ್ಮ, ಸೈಯ್ಯದ್ ಸನೋಬರ, ಲಕ್ಷ್ಮಮ್ಮ, ಮೋನಮ್ಮ, ಸಂಗಮೇಶ, ಜುಬೇದ್ ಬಾಷಾ, ಶರಣಬಸವ, ತನುಬಾಯಿ, ಶರತ್, ಶ್ರೀದೇವಿ ಸೇರಿ 15 ಮಂದಿಯನ್ನು ಚಳ್ಳಕೆರೆ ಮತ್ತು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ದಾವಣಗೆರೆ ಪೂರ್ವವಲಯದ ಐಜಿಪಿ ತ್ಯಾಗರಾಜನ್, ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಎಎಸ್‌ಪಿ ಕುಮಾರಸ್ವಾಮಿ, ಹಿರಿಯೂರು ಡಿವೈಎಸ್ಪಿ ಎಸ್.ಚೈತ್ರಾ, ಸಿಪಿಐ ಕಾಂತರಾಜು, ಐಮಂಗಲ ಪಿಎಸ್‌ಐಗಳಾದ ಇ.ಶಿವಕುಮಾರ್, ಅಶ್ವಿನಿ.ಎಂ.ಹಂಡಿ ಭೇಟಿ ನೀಡಿ ಪರಿಶೀಲಿಸಿದರು.
ಹೆತ್ತವರ ಆಕ್ರಂದನ: ಚಳ್ಳಕೆರೆ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಸಂದರ್ಭ ಹೆತ್ತವರು ಹಾಗೂ ಸಂಬಂಧಿಕರ ಆಕ್ರಂದ ಮುಗಿಲು ಮುಟ್ಟಿತ್ತು. ಐದು ವರ್ಷದ ಮಗು ನರಸಣ್ಣನನ್ನು ಕಳೆದುಕೊಂಡಿದ್ದ ತಾಯಿ ಶ್ರೀದೇವಿ, ತನ್ನ ತೊಡೆ ಮೇಲೆ ಮಲಗಿಸಿಕೊಂಡಿದ್ದ ನನ್ನ ಮಗನನ್ನೇ ಕಿತ್ತುಕೊಂಡು ಬಿಟ್ಟಲ್ಲ ಎಂದು ದುಃಖಿಸುತ್ತಿದ್ದರು. ಇನ್ನೂ ಮದುವೆ ವಯಸ್ಸಿನ ರವಿ (24) ಸಾವಿನಿಂದ ತೀವ್ರ ಆಘಾತಕ್ಕೆ ಒಳಾಗಿದ್ದ ತಾಯಿಯ ಅಳು ನೆರೆದಿದ್ದವರರ ಕಣ್ಣಂಚಿನಲ್ಲಿ ನೀರು ತರಿಸಿತು.